Share this news

ಕಾರ್ಕಳ: ಅಂಗನವಾಡಿ ಕಟ್ಟಡದ ಉದ್ಘಾಟನೆ ವಿಚಾರದಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ ಬಿಜೆಪಿ ನಡುವಿನ ಕಿತ್ತಾಟದಲ್ಲಿ ಅಮಾಯಕ ಅಂಗನವಾಡಿ ಕಾರ್ಯಕರ್ತೆಯ ತಲೆದಂಡವಾಗಿದೆ. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜಯಂತಿನಗರ ಅಂಗನವಾಡಿಯ ಹೆಚ್ಚುವರಿ ಕೊಠಡಿಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎನ್ನುವ ಆರೋಪದಲ್ಲಿ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.ಆದರೆ ಅಧಿಕಾರಿಗಳ ಈ ನಿರ್ಧಾರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕುಕ್ಕುಂದೂರು ಗ್ರಾಮ ಪಂಚಾಯಿತಿ ಆಡಳಿತ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕಾರಣ ಪಂಚಾಯಿತಿ ಅಧ್ಯಕ್ಷೆ ಸೇರಿದಂತೆ ಕಾಂಗ್ರೆಸ್ ಬಿಜೆಪಿ ಸದಸ್ಯರು ಸೇರಿ ಅಂಗನವಾಡಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರ ಜತೆಗೆ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಕಾರ್ಯಕ್ರಮದ ನಡುವೆ ಭಾಗಿಯಾಗಿದ್ದೇ ದೊಡ್ಡ ರಾದ್ದಾಂತಕ್ಕೆ ಕಾರಣವಾಯಿತು. ಸರ್ಕಾರದ ಶಿಷ್ಟಾಚಾರದ ನಿಯಮದಂತೆ ಸ್ಥಳೀಯ ಶಾಸಕರನ್ನು ಆಹ್ವಾನಿಸಬೇಕಿತ್ತು, ಆದರೆ ಶಾಸಕರನ್ನು ಕಡೆಗಣಿಸಿ ಉದಯ ಶೆಟ್ಟಿ ವೇದಿಕೆ ಹಂಚಿಕೊAಡಿದ್ದಕ್ಕೆ ಸಹಜವಾಗಿಯೇ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿತ್ತು. ಇದಲ್ಲದೇ ಶಾಸಕರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಿದ್ದಾರೆ ಎನ್ನುವುದು ಬಿಜೆಪಿಯ ವಾದ. ಇದೆಲ್ಲದರ ನಡುವೆ ಇತ್ತೀಚಿನ ಕೆಲವು ವಿದ್ಯಮಾನಗಳಿಂದ ಶಾಸಕ ಸುನಿಲ್ ಕುಮಾರ್ ಹಾಗೂ ಉದಯ ಶೆಟ್ಟಿ ನಡುವಿನ ಸಂಬAಧ ತೀರಾ ಹಳಸಿದೆ ಎನ್ನುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಈ ಕಾರಣದಿಂದಲೇ ಈ ಪ್ರಕರಣ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಸರ್ಕಾರದ ನಿಯಮಾವಳಿ ಯಾವುದೇ ಸರ್ಕಾರಿ ಕಾಮಗಾರಿಗಳ ಶಂಕುಸ್ಥಾಪನೆ ಅಥವಾ ಉದ್ಘಾಟನೆ ನಡೆದರೂ ಅಂತಹ ಕಾರ್ಯಕ್ರಮಗಳಿಗೆ ಆಯಾ ಕ್ಷೇತ್ರದ ಸಚಿವರು, ಶಾಸಕರು ಸೇರಿದಂತೆ ಸಂಬAಧಪಟ್ಟ ಎಲ್ಲಾ ಸ್ತರದ ಜನಪ್ರತಿನಿಧಿಗಳನ್ನು ಕಡ್ಡಾಯವಾಗಿ ಆಹ್ವಾನಿಸಬೇಕು, ಆದರೆ ಜಯಂತಿನಗರದ ಅಂಗನವಾಡಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರನ್ನು ಆಹ್ವಾನಿಸದೇ ಇರುವುದು ವಿವಾದಕ್ಕೆ ಕಾರಣವಾಗಿದೆ.ಈ ಪ್ರಕರಣದಲ್ಲಿ ಶಿಷ್ಟಾಚಾರ ಪಾಲನೆಯ ಹೊಣೆಗಾರಿಕೆ ಅಧಿಕಾರಿಗಳದ್ದು, ಆದರೆ ಈ ವಿಚಾರದಲ್ಲಿ ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯನ್ನು ಹೊಣೆಗಾರರನ್ನಾಗಿಸುವುದು ಎಷ್ಟು ಸರಿ ಎನ್ನುವುದು ಪ್ರಶ್ನೆಯಾಗಿದೆ.
ಕಟ್ಟಡ ಉದ್ಘಾಟನೆಗೆ ದಿನಾಂಕ ನಿಗದಿ, ಕಾರ್ಯಕ್ರಮ ಆಯೋಜನೆ ಶಿಷ್ಟಾಚಾರ ಪಾಲನೆ ಎಲ್ಲವೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊಣೆಯಾಗಿರುತ್ತದೆ ಆದರೆ ಇಲಾಖೆಯ ಅಧಿಕಾರಿಗಳು ಎಸಗಿರುವ ಕರ್ತವ್ಯಲೋಪ ಹಾಗೂ ಸ್ಥಳೀಯ ಶಾಸಕರನ್ನು ಆಹ್ವಾನಿಸದೇ ಕಟ್ಟಡ ಉದ್ಘಾಟಿಸಿ ತಾವು ಮಾಡಿರುವ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ಮೇಲಾಧಿಕಾರಿಗಳಿಗೆ ಸುಳ್ಳು ವರದಿ ನೀಡಿ ಅಂಗನವಾಡಿ ಕಾರ್ಯಕರ್ತೆಯನ್ನು ಬಲಿಪಶುವನ್ನಾಗಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಒಟ್ಟಿನಲ್ಲಿ ರಾಜಕೀಯ ಪಕ್ಷಗಳ ಮೇಲಾಟ ಹಾಗೂ ಅಧಿಕಾರಿಗಳು ಮಾಡಿರುವ ಎಡವಟ್ಟಿಗೆ ಅಂಗನವಾಡಿ ಕಾರ್ಯಕರ್ತೆಯ ತಲೆದಂಡಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ

 

 

 

 

    

                        

                          

                        

                       

Leave a Reply

Your email address will not be published. Required fields are marked *