ಕಾರ್ಕಳ:ಕಸ್ತೂರಿರಂಗನ್ ವರದಿ ಜಾರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು ಕೇಂದ್ರ ಸರಕಾರವು ಈ ವರದಿಗೆ ಒಳಪಟ್ಟ ರಾಜ್ಯಗಳಿಂದ ವರದಿ ಕೇಳಿದ್ದು, ನಮ್ಮ ರಾಜ್ಯ ಸರ್ಕಾರ ವರದಿ ನೀಡುವ ಸಂದರ್ಭದಲ್ಲಿ ಜನರ ಅಭಿಪ್ರಾಯ ಪಡೆದು ಸಾಧಕಬಾಧಕಗಳ ಕುರಿತು ಚರ್ಚಿಸಿ ವರದಿ ಸಲ್ಲಿಸಬೇಕು. ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಈ ವರದಿ ಜಾರಿಗೆ ಅವಕಾಶ ಇರುವುದಿಲ್ಲ. ರಾಜ್ಯ ಸರ್ಕಾರ ಇದಕ್ಕೆ ಅವಕಾಶ ನೀಡಬಾರದು, ರಾಜ್ಯ ಸರ್ಕಾರವು ಜನವಿರೋಧಿ ವರದಿಯನ್ನು ಸಲ್ಲಿಸಿದ್ದಲ್ಲಿ ಈ ಭಾಗದ ಜನರು ಉಗ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿಯ ಜಿಲ್ಲಾ ಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರವು ಪ್ರತೀ ಪಂಚಾಯತ್‌ನಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಜನರ ಅಭಿಪ್ರಾಯವನ್ನು ಪಡೆದುಕೊಂಡು ಕಸ್ತೂರಿ ರಂಗನ್ ವರದಿಯಲ್ಲಿ ಇರುವಂತಹ ಗೊಂದಲಗಳನ್ನು ನಿವಾರಿಸಿ ಉಪಗ್ರಹ ಮುಖಾಂತರ ನಡೆದಂತಹ ಸರ್ವೇಯನ್ನು ಬಿಟ್ಟು ವಾಸ್ತವದ ಸರ್ವೇಯನ್ನು ನಡೆಸಬೇಕು.
2013ರ ನವೆಂಬರ್ ತಿಂಗಳಲ್ಲಿ ಅಂದಿನ ಕೇಂದ್ರದ ಯುಪಿಎ ಸರ್ಕಾರ ಕಸ್ತೂರಿ ರಂಗನ್ ವರದಿ ಸಿದ್ದಪಡಿಸಿತ್ತು. ಕಾರ್ಕಳದ 13 ಗ್ರಾಮಗಳು ಇದಕ್ಕೆ ಒಳಪಡಲಿದ್ದು, ಉಡುಪಿ ಜಿಲ್ಲೆಯ 37 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಆ ಸಂದರ್ಭ ಕಾರ್ಕಳದ ಇಡೀ ಜನತೆ ವರದಿಯನ್ನು ವಿರೋಧಿಸಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ನಾನು ಉಡುಪಿ ಜಿಲ್ಲೆ ಕಸ್ತೂರಿ ರಂಗನ್ ವರದಿ ವಿರೋಧಿ ಸಮಿತಿಯ ಜಿಲ್ಲಾಧ್ಯಕ್ಷನಾಗಿ ಇಡೀ ಉಡುಪಿ ಜಿಲ್ಲೆಯಲ್ಲಿ ಜನರನ್ನು ಒಟ್ಟು ಸೇರಿಸಿ ಪ್ರತಿಭಟನೆಯನ್ನು ಮಾಡಿದ್ದೆವು. ಈ ಸಂದರ್ಭದಲ್ಲಿ ಇಡೀ ಹೋರಾಟಕ್ಕೆ ಸಮರ್ಥವಾಗಿ ಬೆಂಬಲಿಸಿ ಹೋರಾಟ ಮಾಡುವಲ್ಲಿ ಕಾರ್ಕಳದ ಅಂದಿನ ಶಾಸಕ ವಿ ಸುನಿಲ್ ಕುಮಾರ್ ಅವರು ಈ ಹೋರಾಟದಲ್ಲಿ ಇಡೀ ರಾಜ್ಯವನ್ನೇ ಗಮನ ಸೆಳೆದಿದ್ದರು.ಇದಲ್ಲದೇ ಕುಂದಾಪುರ ಹಾಗೂ ಬೈಂದೂರಿನ ಶಾಸಕರು ಮತ್ತು ಜನಪ್ರತಿನಿಧಿಗಳು ಈ ಜನಪರ ಹೋರಾಟವನ್ನು ಬೆಂಬಲಿಸಿ ಸಹಕಾರವನ್ನು ನೀಡಿದ್ದರು. ನನ್ನ ನೇತೃತ್ವದಲ್ಲಿ 20ಕ್ಕೂ ಮೇಲ್ಪಟ್ಟು ಸಭೆಯನ್ನು ಉಡುಪಿ ಜಿಲ್ಲೆಯಾದ್ಯಂತ ನಡೆಸಿ ಲಕ್ಷಾಂತರ ಜನರಿಗೆ ಧೈರ್ಯವನ್ನು ತುಂಬಿಸಲಾಗಿತ್ತು. ಜನರ ತೀವ್ರ ಹೋರಾಟಕ್ಕೆ ಮಣಿದ ಅಂದಿನ ರಾಜ್ಯ ಸರ್ಕಾರ ವರದಿ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿತ್ತು. ಆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ರಾಜ್ಯ ಸರ್ಕಾರಗಳು ಕೂಡ ವರದಿಯನ್ನು ವಿರೋಧಿಸಿ ವರದಿ ಸಲ್ಲಿಸಿತ್ತು.
ಇದೀಗ ಮತ್ತೆ ಕೇಂದ್ರ ಸರ್ಕಾರ ರಾಜ್ಯಗಳ ಅಭಿಪ್ರಾಯ ಕೇಳಿದ್ದು ರಾಜ್ಯ ಸರ್ಕಾರ ವರದಿ ನೀಡುವ ಸಂದರ್ಭ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ಕಸ್ತೂರಿರಂಗನ್ ವರದಿಗೆ ಇದರ ಬಗ್ಗೆ ಸ್ಥಳೀಯ ಶಾಸಕರು, ಸಂಸದರು ಈಗಾಗಲೇ ರಾಜ್ಯ ಸರ್ಕಾರಕ್ಕೆ ಒತ್ತಡವನ್ನು ಹೇರಿದ್ದು, ರಾಜ್ಯ ಸರ್ಕಾರ ಎಲ್ಲಾ ಸ್ತರದ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ವರದಿ ನೀಡಬೇಕು.ವರದಿಯಲ್ಲಿರುವ ಕೆಲವೊಂದು ಷರತ್ತುಗಳಿಗೆ ವಿನಾಯಿತಿ ನೀಡಬೇಕು. ಈಗಿರುವ ನಿರ್ಬಂಧಿತ ಪ್ರದೇಶವನ್ನು ಕೈಬಿಟ್ಟು ಅದನ್ನು ಶೂನ್ಯ ಕಿಲೋಮೀಟರ್ ಅಂದರೆ ಅರಣ್ಯದ ಗಡಿ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು. ಹಾಗೂ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗೆ ಯಾವುದೇ ಅಡೆತಡೆ ಇಲ್ಲದೇ, ಅದರಲ್ಲೂ ಮುಖ್ಯವಾಗಿ ಕಸ್ತೂರಿರಂಗನ್ ವರದಿ ಬಗ್ಗೆ ಜನರಲ್ಲಿ ಮೂಡಿರುವ ಭಯವನ್ನು ರಾಜ್ಯ ಸರ್ಕಾರ ನಿವಾರಿಸಬೇಕು.ಕಸ್ತೂರಿ ರಂಗನ್ ವರದಿ ಮಂಡನೆ ಆಗುವ ಮೊದಲೇ ಮಾಧವ ಗಾಡ್ಗೀಳ್ ವರದಿ ಬಂದಿದ್ದು ನಾವು ಇಂತಹ ಜನ ವಿರೋಧಿ ಯೋಜನೆಗಳಿಗೆ ಆರಂಭದಿಂದಲೇ ಹೋರಾಟ ಮಾಡಿಕೊಂಡು ಬಂದವರು. ಒಂದು ವೇಳೆ ರಾಜ್ಯ ಸರ್ಕಾರ ಜನರ ಅಭಿಪ್ರಾಯ ಪಡೆಯದೇ ಏಕಾ ಏಕಿ ವರದಿ ಸಲ್ಲಿಸಿದರೆ ನಾವು ಉಗ್ರ ಹೋರಾಟ ಮಾಡಬೇಕಾದೀತು ಎಂದು ಮುಟ್ಲುಪಾಡಿ ಸತೀಶ್ ಶೆಟ್ಟಿ ಎಚ್ಚರಿಸಿದ್ದಾರೆ







in 
