Share this news

ಕಾರ್ಕಳ: ಕಳೆದ ಒಂದು ವಾರದಿಂದ ಕಾರ್ಕಳ ತಾಲೂಕಿನ ಅಜೆಕಾರು ,ಕಾರ್ಕಳ ಹಾಗೂ ಹೆಬ್ರಿಯಲ್ಲಿ ATM ನಿಂದ  ಹಣ ತೆಗೆಯಲು ಬರುವ ಓದು ಬರಹ ಇಲ್ಲದವರಿಗೆ ಹಣ ತೆಗೆದುಕೊಡುವುದಾಗಿ ಹೇಳಿ ಬಳಿಕ ಅವರಿಗೆ ನಕಲಿ ಕಾರ್ಡ್ ನೀಡಿ ಗ್ರಾಹಕರ ಅಸಲಿ ಕಾರ್ಡ್ ಮೂಲಕ ಲಕ್ಷಾಂತರ ರೂ ಹಣ ದೋಚುತ್ತಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಅಜೆಕಾರು ಪೊಲೀಸರು ಕಾಡುಹೊಳೆ ಚೆಕ್ ಪೋಸ್ಟ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ATM ನಿಂದ ದರೋಡೆ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳರ ಗ್ಯಾಂಗಿನ ಜಾಡು ಹಿಡಿದ ಪೊಲೀಸರ ತಂಡ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳ ಮೂಲಕ ಕಳ್ಳರ ಚಲನವಲನದ ಮೇಲೆ ನಿಗಾ ಇರಿಸಿ ಮಂಗಳವಾರ ಸಂಜೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಹೊಳೆ ಚೆಕ್ ಪೋಸ್ಟ್ ನಲ್ಲಿ ಮೂವರು ಆರೋಪಿಗಳನ್ನು ಕಾರು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯ ಎಸ್‌ಐ ಶುಭಕರ್ ನೇತೃತ್ವದ ಪೊಲೀಸರ ತಂಡ ಮಹಾರಾಷ್ಟçದ ಸೋಲಾಪುರ ಜಿಲ್ಲೆಯ ಕೇದಾರನಾಥ ನಗರದ ಶ್ರವಣ್ ಸತೀಶ್ ಮಿನಜಗಿ(27), ಸೋಲಾಪುರ ಜಿಲ್ಲೆಯ ಕುಮ್ಟಾ ನಗರದ ನಿವಾಸಿ ಪ್ರದೀಪ ಮಾರುತಿ ಇಂಗ್ಲೆ(27) ಹಾಗೂ ಪುಣೆಯ ಇಂದಾಪುರ ನಿವಾಸಿ ಕಿರಣ್ ಬಾಲು ಚೌಹಾಣ್(28) ಎಂಬವರನ್ನು ಬಂಧಿಸಿ, ಅವರಿಂದ ಮಾರುತಿ ಸ್ವಿಫ್ಟ್ ಕಾರು, 70 ಸಾವಿರ ನಗದು, ಮೂರು ಮೊಬೈಲ್ ಹಾಗೂ ಕದ್ದಿರುವ ವಿವಿಧ ಬ್ಯಾಂಕುಗಳ 52 ಎಟಿಎಂ ಕಾರ್ಡ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಗಳ ಪೈಕಿ ಇಬ್ಬರು ಈಗಾಗಲೇ ಹಲವು ಅಪರಾಧ ಹಾಗೂ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿ ಖುಲಾಸೆಗೊಂಡರೆ ಇತರ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡು ಮತ್ತೆ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅಂತರ್ ರಾಜ್ಯ ದರೋಡೆಕೋರರ ಗ್ಯಾಂಗ್ ಯಾರಿಗೂ ಅನುಮಾನ ಬರದಂತೆ ಸಭ್ಯ ನಾಗರಿಕರಂತೆ ಕಾರಿನಲ್ಲೇ ಹಲವು ರಾಜ್ಯಗಳನ್ನು ಸುತ್ತಿ ಅಮಾಯಕರ ದುಡ್ಡು ಲಪಟಾಯಿಸಿ ಮಜಾ ಮಾಡುತ್ತಿತ್ತು.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಮಂಜಪ್ಪ ಡಿ,ಆರ್, ರವಿ,ಬಿ.ಕೆ, ಎಸ್‌ಐ ಶುಭಕರ್,ಸಿಬ್ಬಂದಿಗಳಾದ ಸತೀಶ್ ಬೆಳ್ವೆ, ಪ್ರದೀಪ್ ಶೆಟ್ಟಿ, ನಾಗೇಶ, ಬಸವರಾಜ್, ಭದ್ರ ಶೆಟ್ಟಿ, ಪ್ರವೀಣ್, ಶಶಿಕಲಾ, ಸಿಡಿಆರ್ ವಿಭಾಗದ ನಿತಿನ್ ಹಾಗೂ ದಿನೇಶ್ ಭಾಗವಹಿಸಿದ್ದರು.

 

                       in 

 

Leave a Reply

Your email address will not be published. Required fields are marked *