ಪಡುಬಿದ್ರೆ: ಕಳೆದ 2014ರಲ್ಲಿ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯನ್ನು ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಪಡುಬಿದ್ರೆ ಪೊಲೀಸರು ಬೆಂಗಳೂರಿನಲ್ಲಿ ಪತ್ತೆಹಚ್ಚಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಲಿಮಾರು ನಿವಾಸಿ ಶಂಕರ ಶೆಟ್ಟಿ ಎಂಬವರ ಪತ್ನಿ ಶ್ರುತಿ ಶೆಟ್ಟಿ ಎಂಬವರು ಪತ್ತೆಯಾದ ಮಹಿಳೆ. ಅವರು ಕಳೆದ 2014ರ ಜೂನ್25 ರಂದು ತಾನು ಅಜ್ಜಿ ಮನೆಗೆ ಹೋಗಿ ಬರುವುದಾಗಿ ತನ್ನ ಗಂಡನಲ್ಲಿ ಹೇಳಿ ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಪತ್ನಿ ಶ್ರುತಿ ಕಾಣೆಯಾದ ಹಿನ್ನೆಲೆಯಲ್ಲಿ ಶಂಕರ ಶೆಟ್ಟಿ ಪಡುಬಿದ್ರೆ ಠಾಣೆಗೆ ದೂರು ನೀಡಿದ್ದರು.ಪೊಲೀಸರು ಆಕೆಯನ್ನು ಸಾಕಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಶ್ರುತಿ ಶೆಟ್ಟಿ ನಾಪತ್ತೆಯಾಗಿ 10 ವರ್ಷಗಳ ಬಳಿಕ ಆಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎನ್ನುವ ಮಾಹಿತಿ ಪಡೆದ ಉಡುಪಿ ಪೊಲೀಸರು ಬೆಂಗಳೂರಿನ ವರ್ತೂರಿನಲ್ಲಿ ಆಕೆಯನ್ನು ಪತ್ತೆಹಚ್ಚಿದ್ದಾರೆ.
ಪಡುಬಿದ್ರೆ ಠಾಣಾ ಪಿಎಸ್ಐ ಪ್ರಸನ್ನ ಎಂ ನಿರ್ದೇಶನದ ಮೇರೆಗೆ ಠಾಣೆಯ ಎಎಸ್ಐ ರಾಜೇಶ್ ಪಿ ಹಾಗೂ ಹೆಡ್ ಕಾನ್ಸ್ಟೇಬಲ್ ದೇವರಾಜ ಅವರು ಬೆಂಗಳೂರಿಗೆ ತೆರಳಿ ಶ್ರುತಿ ಶೆಟ್ಟಿ ಅವರಲ್ಲಿ ಹೇಳಿಕೆ ಪಡೆದಿದ್ದಾರೆ. ಶ್ರುತಿ ಶೆಟ್ಟಿ ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು ತಾನು ಇನ್ನುಮುಂದೆ ಗಂಡನ ಜತೆ ಜೀವನ ನಡೆಸುವುದಿಲ್ಲ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಗಂಡ ಶಂಕರ ಶೆಟ್ಟಿಯವರನ್ನು ಪಡುಬಿದ್ರೆ ಠಾಣೆಗೆ ಕರೆಯಿಸಿ ಈ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.
in