ಕಾರ್ಕಳ: ತಳಮಟ್ಟದ ಗ್ರಾಮೀಣಾಭಿವೃದ್ಧಿಯ ಗುರಿ ಸಾಧನೆಗಾಗಿ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸ ಬೇಕಾದುದು ಇಂದಿನ ಆಧ್ಯತೆಯಾಗಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಪೂರ್ವ ತಯಾರಿಯ ನಿಮಿತ್ತ ನಡೆದ ಗ್ರಾಮ ಪಂಚಾಯತ್ ಸದಸ್ಯರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತಾಡುತ್ತಿದ್ದರು.
ಕಾಂಗ್ರೆಸ್ ಸಾಮಾಜಿಕ ಕಾಳಜಿಯ ಕಾರ್ಯಸಾಧನೆಯ ಬದ್ಧತೆಯ ಮೇಲೆ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಹಾಗೂ ಸಹಕಾರಿ ಕ್ಷೇತ್ರದ ಬಗ್ಗೆ ಅಪಾರ ಅನುಭವ ಹೊಂದಿರುವ ರಾಜು ಪೂಜಾರಿ ಯವರನ್ನು ಚುನಾವಣಾ ಕಣಕ್ಕಿಳಿಸಿದೆ.
ರಾಜು ಪೂಜಾರಿ ಯವರು ಗ್ರಾಮ ಪಂಚಾಯತ್ ಸದಸ್ಯನಾಗಿ ಅಧ್ಯಕ್ಷನಾಗಿ, ತಾಲೂಕು ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಸದಸ್ಯ ಅಧ್ಯಕ್ಷನಾಗಿ ಅವಿಭಜಿತ ದ.ಕ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಿ ಕೊಟ್ಟವರು ಎಂದು ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯ ವಿನಯ ಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತಾಡಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಅನುಭವಿಸಿದ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಈ ಭಾರಿ ನಮ್ಮ ಅಭ್ಯರ್ಥಿ ರಾಜು ಪೂಜಾರಿಯವರನ್ನು ಗೆಲ್ಲಿಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ ಎಂದು ಕರೆ ನೀಡಿದರು.
ಅಭ್ಯರ್ಥಿ ರಾಜು ಪೂಜಾರಿ ಮಾತಾಡಿ ತನ್ನ ಸಾಧನೆಗಳನ್ನು ಕಾರ್ಯಕರ್ತರ ಮುಂದಿಟ್ಟು ಮತಯಾಚಿಸಿ ತನ್ನ ಗೆಲುವು ಕಾರ್ಯಕರ್ತರ ಗೆಲುವು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಲ್ಕೆಬೈಲ್, ಕೆಪಿಸಿಸಿ ಉಸ್ತವಾರಿ ಎಂ ಎಸ್ ಮಹಮ್ಮದ್, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಸದಾಶಿವ ದೇವಾಡಿಗ, ಚಂದ್ರಶೇಖರ ಬಾಯಿರಿ, ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಸಯಿಫುದ್ದೀನ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಸಂದರ್ಭೋಜಿತ ಧನ್ಯವಾದ ಸಮರ್ಪಿಸಿದರು.