ಮಂಗಳೂರು: ಮಂಗಳೂರು–ಬೆಂಗಳೂರು ರಾಷ್ಟೀಯ ಹೆದ್ದಾರಿ 75ರ ದಕ್ಷಿಣ ಕನ್ನಡದ ನೆಲ್ಯಾಡಿಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ನ. 17 ರಂದು ಭಾನುವಾರ ಸಂಜೆ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಬಳಿ ಮಣ್ಣಗುಂಡಿಯಲ್ಲಿ ಸಂಭವಿಸಿದೆ.
ಮೃತಪಟ್ಟವರನ್ನು ಕುಂಬ್ರದ ತಿಂಗಳಾಡಿ ಸಮೀಪದ ತ್ಯಾಗರಾಜೆಯ ಮಜ್ಜರಡ್ಕ ರಾಮಣ್ಣ ಪೂಜಾರಿ ಎಂಬವರ ಪುತ್ರ 26 ವರ್ಷದ ಜಗದೀಶ್ ಎಂದು ಗುರುತಿಸಲಾಗಿದೆ.
ಮಾರುತಿ ಸ್ವಿಫ್ಟ್ ಕಾರೊಂದರಲ್ಲಿ ಗುಂಡ್ಯ ಗಡಿಯ ಶಿರಾಡಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಿ ಬರುತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತಿದ್ದು ಅಲ್ಲದೆ ಮಳೆ ಕೂಡ ಬರುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಛಿದ್ರಗೊಂಡಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
































































































