ಉಡುಪಿ : ಮಣಿಪಾಲದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಬಾಣಸಿಗನೊಬ್ಬನ ಭೀಕರ ಕೊಲೆಯಾಗಿದ್ದು, ದುಷ್ಕರ್ಮಿಗಳು ಬಿಯರ್ ಬಾಟಲ್ ಒಡೆದು ಅದರ ಗಾಜಿನಿಂದ ಕತ್ತು ಸೀಳಿ, ಬರ್ಬರವಾಗಿ ಕೊಲೆ ಮಾಡಿ ಶವವನ್ನು ರಸ್ತೆ ಬದಿ ಎಸೆದ ಘಟನೆ ಉಡುಪಿಯ ಮಣಿಪಾಲ ಅನಂತ ಕಲ್ಯಾಣನಗರ ಸಮೀಪ ನಡೆದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಕೊಲೆಯಾದ ಬಾಣಸಿಗ ಹೊನ್ನಾವರ ಕಾಸಕೋಡು ಶ್ರೀಧರ್ ನಾಯಕ ಎಂದು ತಿಳಿದುಬಂದಿದೆ.ಈತ ಮಣಿಪಾಲ ಈಶ್ವರನಗರದ ಹೊಟೇಲ್ ಒಂದರ ಕುಕ್ ಎಂದು ತಿಳಿದುಬಂದಿದೆ. ಬೆಳಿಗ್ಗೆ 6ಗಂಟೆ ಸುಮಾರಿಗೆ ಮೂರರಿಂದ ನಾಲ್ಕು ಮಂದಿಯ ತಂಡ ಹೊಡೆದಾಟ ನಡೆಸುತ್ತಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿದಾಗ ಶ್ರೀಧರ್ ಅವರ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದು ಪರಾರಿಯಾಗಿದ್ದಾರೆ.ಗಂಭೀರವಾಗಿ ಗಾಯಗೊಂಡ ಶ್ರೀಧರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯು ಶುಕ್ರವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋದಾಗ ಸ್ಥಳೀಯರ ಗಮನಕ್ಕೆ ಬಂದಿದೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಡಾ. ಕೆ.ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಹತ್ಯೆ ಮಾಡಿದ ದುಷ್ಕರ್ಮಿಗಳು ಯಾರು ಹಾಗೂ ಯಾವ ಉದ್ದೇಶಕ್ಕಾಗಿ ಈ ಕೃತ್ಯ ನಡೆದಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.