ಬೆಂಗಳೂರು : ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳದ ಜತೆಗೆ ರಾಜ್ಯಗಳಿಗೆ ನೀಡುತ್ತಿದ್ದ ಬಡ್ಡಿ ರಹಿತ ಸಾಲದ ಅವಧಿ ಹಾಗೂ ಮೊತ್ತ ಹೆಚ್ಚಖದ ಮೂಲಕ ಕೇಂದ್ರ ಬಜೆಟ್ ಜನಸಾಮಾನ್ಯರು ಹಾಗೂ ಒಕ್ಕೂಟ ವ್ಯವಸ್ಥೆಯ ಬಲವರ್ಧನೆಗೆ ನೆರವಾಗಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು,ವಿಕಸಿತ ಹಾಗೂ ಶ್ರೇಷ್ಠ ಭಾರತ ನಿರ್ಮಾಣದ ದಿಕ್ಕಿನಲ್ಲಿ ಈ ಬಜೆಟ್ ಹಲವು ಮಹತ್ವದ ಅಂಶಗಳನ್ನು ಒಳಗೊಂಡಿದೆ. ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸಾ ವೆಚ್ಚ ಇಳಿಕೆ ಮಾಡುವ ಮೂಲಕ ಮಧ್ಯಮವರ್ಗಕ್ಕೆ ಅಕಸ್ಮಿಕವಾಗಿ ಎದುರಾಗುತ್ತಿದ್ದ ವೈದ್ಯಕೀಯ ಹೊರೆ ಕಡಿಮೆ ಮಾಡಲಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಸಮತೋಲನ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಮ ವರ್ಗದವರಿಗೆ ಹಾಗೂ ದುಡಿಯುವ ವರ್ಗಕ್ಕೆ ಕೇಂದ್ರ ಸರ್ಕಾರ ಅನಿರೀಕ್ಷಿತ ಅಚ್ಚರಿಯ ಗಿಫ್ಟ್ ನೀಡಿದೆ. 12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು ಯಾವುದೇ ಹೊಸ ತೆರಿಗೆ ವಿಧಿಸಿಲ್ಲ. ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಳದ ಗುರಿ ಹೊಂದಲಾಗಿದ್ದು ಯೂರಿಯಾ ಗೊಬ್ಬರ, ಬೀಜ, ಉತ್ಪಾದನೆಯಲ್ಲಿ ಸಂಪೂರ್ಣವಾಗಿ ಆತ್ಮನಿರ್ಭರವಾಗಲು ಅವಕಾಶ ನೀಡಲಾಗಿದೆ.
ರಾಜ್ಯಗಳಿಗೆ 1.5 ಲಕ್ಷ ಕೋಟಿ ರೂ. 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ಘೋಷಿಸಲಾಗಿದ್ದು, ಇದರಿಂದ ಕರ್ನಾಟಕಕ್ಕೂ 7ರಿಂದ 8 ಸಾವಿರ ಕೋಟಿ ರೂ. ಸಾಲ ದೊರೆಯುವ ಸಾಧ್ಯತೆ ಇದೆ. ಸಿದ್ದರಾಮಯ್ಯನವರೇ ಇದು ರಾಜ್ಯದ ಅಭಿವೃದ್ಧಿಗೆ ಅಕ್ಷಯಪಾತ್ರೆ ನೀಡುವ ಬಜೆಟ್ ಆಗಿದೆ ಎಂದು ತಿರುಗೇಟು ನೀಡಿದ್ದಾರೆ.