ಉಡುಪಿ: 20 ವರ್ಷಗಳ ಹಿಂದೆ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡು ಬಳಿಕ ನಾಪತ್ತೆಯಾಗಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಭಾನುವಾರ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹಾಗೂ ಎಸ್ಪಿ ಡಾ. ಅರುಣ್ ಕೆ ಅವರ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದರು.
ಮೊದಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಯಿತು. ಅಲ್ಲಿಂದ ಬೀಗಿ ಭದ್ರತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಲಕ್ಷ್ಮೀ ಅವರನ್ನು ಕರೆತರಲಾಯಿತು. ಅಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸಮ್ಮುಖದಲ್ಲಿ ಲಕ್ಷೀ ಶರಣಾಗತಿ ಘೋಷಿಸಿದರು. ಬಳಿಕ ಮಾತನಾಡಿದ ತೊಂಬಟ್ಟು ಲಕ್ಷ್ಮೀ, ನಕ್ಸಲ್ ಶರಣಾಗತಿ ಬಗ್ಗೆ ಟಿವಿಗಳಲ್ಲಿ ಸುದ್ದಿ ನೋಡಿ ತಿಳಿದುಕೊಂಡೆ. ಸಿದ್ದರಾಮಯ್ಯನವರು ಒಂದು ಅವಕಾಶ ಕೊಟ್ಟಿದ್ದಾರೆ. ಅದರಂತೆ ಶರಣಾಗಿದ್ದೇನೆ. ಯಾವುದೇ ಒತ್ತಡ ಇರಲಿಲ್ಲ. ನನಗೆ ಸಿದ್ದರಾಮಯ್ಯನವರು ಸಹಾಯ ಮಾಡಬೇಕು. ನಮ್ಮೂರಿಗೆ ರಸ್ತೆ ನೀರು ಶಾಲೆ, ಆಸ್ಪತ್ರೆ ಇಲ್ಲ. ಅದನ್ನು ಮಾಡಿಕೊಡಬೇಕು ಎಂದರು.
ಪೊಲೀಸ್ ಭದ್ರತೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಆಕೆಯ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರು ಮತ್ತು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯರಾದ ಶ್ರೀಪಾಲ ಇದ್ದರು.