ಕಾರ್ಕಳ: ಬೈಲೂರು ಸಮೀಪದ ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಯೋಜನೆ ಯಾವುದೇ ಕಾರಣಕ್ಕೂ ಪೂರ್ಣಗೊಳಿಸಬಾರದು, ಈ ಯೋಜನೆಯ ಆಧಾರರದಲ್ಲಿ ಮುಂದಿನ ಚುನಾವಣೆ ನಡೆಯಬೇಕು ಹಾಗೂ ಕಾರ್ಕಳದ ಜನ ಅದನ್ನು ನೋಡಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಬೇಕೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಕಾರ್ಕಳದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಮಾತನಾಡಿದ ಅವರು, ಪರಶುರಾಮ ಥೀಮ್ ಪಾರ್ಕಿನ ಅಪೂರ್ಣ ಕಾಮಗಾರಿಯನ್ನು ಕರಾವಳಿಯ ಜನತೆಗೆ ತೋರಿಸಿ ಬಿಜೆಪಿಯ ನಾಯಕರ ಭವ್ಯವಾದ ಯೋಜನೆಯ ಮಹಾನ್ ಸಾಧನೆಯನ್ನು ಜನತೆಗೆ ವಿವರಿಸಬೇಕು ಎಂದು ಬಿಜೆಪಿಯನ್ನು ಕುಟುಕಿದರು. ಇದೇವೇಳೆ ಮಾತನಾಡಿದ ಅವರು, ಟ್ವೀಟ್ ಮೂಲಕ ಹಿಂದುತ್ವದ ಭದ್ರಕೋಟೆಗೆ ನನಗೆ ಸ್ವಾಗತ ನೀಡಿದ ಅವರು ಮೊದಲು ಅವರ ಪಕ್ಷವನ್ನು ಸರಿಪಡಿಸಲಿ ಹಾಗೂ ಯಾಕೆ ಹುದ್ದೆಗೆ ಅವರು ರಾಜೀನಾಮೆ ಕೊಟ್ಟರು ಎಂದು ಜನತೆ ತಿಳಿಸಲಿ ಎಂದು ಸುನಿಲ್ ಕುಮಾರ್ ಅವರಿಗೆ ಸವಾಲೆಸೆದರು. ಪರಶುರಾಮ ಥೀಮ್ ಪಾರ್ಕಿನ ಹೆಸರಿನಲ್ಲಿ ರಾಜಕಾರಣ ಮಾಡಿ ಬಳಿಕ ಅದನ್ನು ಅಪೂರ್ಣ ಮಾಡಿ ಯಾವ ಪರಿಸ್ಥಿತಿಯಲ್ಲಿ ಪರಶುರಾಮನನ್ನು ಇಟ್ಟಿದ್ದಾರೆ ಎಂದು ಕಾಕಳದ ಜನತೆಗೆ ತಿಳಿಸಬೇಕಿದೆ ಎಂದರು. ಹಿಂದೂ ಧರ್ಮದ ಹೆಸರಿನಲ್ಲಿ ಬಿಜೆಪಿಯವರು ಹಿಂದೂಗಳು ಮುಂದು ಎಂದು ರಾಜಕಾರಣ ಮಾಡಿದರೆ, ಕಾಂಗ್ರೆಸ್ ಪಕ್ಷ ನಾವೆಲ್ಲರೂ ಒಂದು ಎಂಬ ನೆಲೆಯಲ್ಲಿ ರಾಜಕಾರಣ ಮಾಡುತ್ತೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಕರಾವಳಿ ಪ್ರದೇಶಕ್ಕೆ ಪ್ರವಾಸೋದ್ಯಮ ನೀತಿ ಹಾಗೂ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಗೆ ಒತ್ತು
ನಮ್ಮ ಸರ್ಕಾರವು ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಿದೆ ಹಾಗೂ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆ ರೂಪಿಸಲಾಗುತ್ತದೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ, ಇದೊಂದು ಕುಟುಂಬವಿದ್ದAತೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶ ಒಗ್ಗಟ್ಟಾಗಿರಲು ಸಾಧ್ಯ, 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸಬೇಕೆಂದು ಕರೆ ನೀಡಿದರು.
