ಕಾರ್ಕಳ:ಪ್ರವಾಸೋದ್ಯಮ ದೃಷ್ಟಿಯಿಂದ ಕಾರ್ಕಳದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕನ್ನು ಅಪೂರ್ಣ ಸ್ಥಿತಿಯಲ್ಲಿಯೇ ಮುಂದಿನ ಚುನಾವಣೆವರೆಗೂ ಉಳಿಸಿಕೊಂಡು ರಾಜಕೀಯ ಲಾಭ ಪಡೆಯುವ ಕಾಂಗ್ರೆಸ್ಸಿನ ನೀಚ ರಾಜಕಾರಣ ಮತ್ತು ದುರುದ್ದೇಶಕ್ಕೆ ಧಿಕ್ಕಾರವಿದೆ.ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು 2 ವರ್ಷಗಳಾದರೂ ಪರಶುರಾಮ ಥೀಮ್ ಪಾರ್ಕಿನ ಯೋಜನೆಯ ಬಾಕಿ ಇರುವ ಅನುದಾನವನ್ನೂ ಬಿಡುಗಡೆ ಮಾಡದೆ, ತನಿಖೆಯನ್ನೂ ಸಹ ಮುಂದುವರಿಸದಂತೆ ತಡೆಹಿಡಿದು ದಿನಕ್ಕೊಂದು ರೀತಿಯ ಪ್ರಹಸನ ನಡೆಸುತ್ತಿರುವ ಕಾರ್ಕಳ ಕಾಂಗ್ರೆಸ್ ಮುಖಂಡರು ಇದೀಗ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮುಖಾಂತರವೂ ಥೀಮ್ ಪಾರ್ಕನ್ನು ಮುಂದಿನ ಚುನಾವಣೆಯವರೆಗೆ ಹೀಗೆ ಮುಂದುವರಿಸಬೇಕೆಂದು ಹೇಳಿಸಿದ್ದು ಕಾಂಗ್ರೆಸ್ಸಿನ ಷಡ್ಯಂತ್ರವನ್ನು ಜಗಜ್ಜಾಹೀರು ಮಾಡಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕಾರ್ಕಳದ ಅಭಿವೃದ್ದಿಯ ಬಗ್ಗೆ ಕಾಂಗ್ರೆಸ್ಸಿಗಿರುವ ಅಸಡ್ಡೆಯನ್ನು ತೋರಿಸುತ್ತದೆ. ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಕಾರ್ಕಳದ ಜನತೆಗೆ ಇಷ್ಟು ದೊಡ್ಡ ದ್ರೋಹವೆಸಗಲು ಮುಂದಾಗಿರುವ ಕಾಂಗ್ರೆಸ್ ನಡೆಗೆ ಧಿಕ್ಕಾರವಿದೆ ಎಂದು ನವೀನ್ ನಾಯಕ್ ವಾಗ್ದಾಳಿ ನಡೆಸಿದ್ದಾರೆ.
ಕುಟುಂಬೋತ್ಸವ ಕಾರ್ಯಕ್ರಮಕ್ಕೆ 15 ಸಾವಿರ ಜನ ಸೇರಿಸುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಗಿದೆ. ಕೇವಲ ಎರಡು ಸಾವಿರ ಜನರನ್ನಷ್ಟೇ ಸೇರಿಸಲು ಶಕ್ತವಾದ ಕಾಂಗ್ರೆಸ್ಸಿಗೆ ಕಾರ್ಕಳದಲ್ಲಿ ಅದೆಷ್ಟು ಜನ ಬೆಂಬಲವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ, ಮಿತಿಮೀರಿದ ಬೆಲೆ ಏರಿಕೆ ಹಾಗೂ ಕಾಂಗ್ರೆಸ್ಸಿನ ದ್ವೇಷ ರಾಜಕಾರಣದಿಂದ ಬೇಸತ್ತ ಜನ ಕಾಂಗ್ರೆಸ್ ಕಾರ್ಯಕ್ರಮವನ್ನು ಧಿಕ್ಕರಿಸಿದ್ದಾರೆ, ಕಾರ್ಕಳದಲ್ಲಿ ಏರ್ಪಡಿಸಲಾಗಿರುವ ಕಾಂಗ್ರೆಸ್ ಕುಟುಂಬೋತ್ಸವ ಸಂಪೂರ್ಣ ವಿಫಲವಾಗಿದೆ. ಈ ಕಾರ್ಯಕ್ರಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ
