Share this news

 

 

 

ಬೆಂಗಳೂರು : ಬಿಲ್ ಪಾವತಿ ಮಾಡಲು ಗುತ್ತಿಗೆದಾರರಲ್ಲಿ ಯಾರಾದರೂ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಾಕಿ ಬಿಲ್ ಪಾವತಿಗೆ ನಮ್ಮ ಬಳಿ ಲಂಚ ಕೇಳುತ್ತಾರೆ ಎನ್ನುವ ಗುತ್ತಿಗೆದಾರರ ಆರೋಪಕ್ಕೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಮ್ಮ ಸಂಪುಟ ಸಚಿವರಾದ ಸತೀಶ್ ಜಾರಕಿಹೊಳಿ, ಬೋಸರಾಜು ಅವರು ಇದರಲ್ಲಿ ಭಾಗಿಯಾಗಿಲ್ಲ ಇದು ಸುಳ್ಳು ಆರೋಪ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಲ್ ಪಾವತಿಗೆ ಕಮಿಷನ್ ಕೇಳಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ. ಬಿಲ್ ಪಾವತಿ ವಿಚಾರವಾಗಿ ಗುತ್ತಿಗೆದಾರರು ಯಾಕೆ ಸಚಿವರನ್ನು ಕೇಳಬೇಕು. ಅವರಿಗೆ ಇಲಾಖೆಯ ಬಜೆಟ್ ಅರಿವಿಲ್ಲವೇ? ಅನುದಾನವೇ ಇಲ್ಲದಿರುವಾಗ ಅವರು ಗುತ್ತಿಗೆ ಹೇಗೆ ತೆಗೆದುಕೊಂಡರು ಎಂದು ಪ್ರಶ್ನಿಸಿದರು.
ಬಿಜೆಪಿ ಅವಧಿಯಲ್ಲಿ ನನ್ನ ಇಲಾಖೆಯೊಂದರಲ್ಲೇ 1 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಗುತ್ತಿಗೆಯನ್ನು ನೀಡಲಾಗಿದೆ. ಈ ಗುತ್ತಿಗೆ ಬಿಲ್ ಪಾವತಿ ಮಾಡಿಸುವಂತೆ ಶಾಸಕರ ಮೂಲಕ ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಒಂದು ವರ್ಷ ಮುಂಚಿತವಾಗಿಯೇ ನಾವು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆವು. ಅನುದಾನ ಇಲ್ಲದೇ ಯಾವುದೇ ಕಾಮಗಾರಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದೆವು. ಆದರೂ ನಮ್ಮ ಮಾತು ಕೇಳದೆ ಈಗ ರಾಜಕೀಯ ನಾಯಕರ ಮೂಲಕ ಬಿಲ್ ಪಾವತಿಗೆ ಮನವಿ ಪತ್ರ ನೀಡುತ್ತಿದ್ದಾರೆ ಎಂದು ಹೇಳಿದರು.

 

 

 

Leave a Reply

Your email address will not be published. Required fields are marked *