Share this news

 

 

ಸಾಂದರ್ಭಿಕ ಚಿತ್ರ

ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಅಯ್ಯಪ್ಪನಗರ, ನಕ್ರೆ ವರ್ಣಬೆಟ್ಟು, ಜಾರ್ಕಳ ಹಾಗೂ ಎರ್ಲಪಾಡಿ ಎಂಬಲ್ಲಿ ಪರವಾನಿಗೆಯಲ್ಲದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದಾ ಮಾರ್ಗದರ್ಶನದ ಮೇರೆಗೆ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು ಗಣಿಗಾರಿಕೆಗೆ ಬಳಸುತ್ತಿದ್ದ ಭಾರೀ ಗಾತ್ರದ ಸುತ್ತಿಗೆಗಳು, ಕ್ರೇನ್, ಟಿಪ್ಪರ್ ಲಾರಿಗಳು ಸೇರಿದಂತೆ ಇತರೇ ಪರಿಕರಗಳನ್ನು ಸೀಜ್ ಮಾಡಿ, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಮಾಲೀಕರು, ಲಾರಿ ಚಾಲಕರು ಹಾಗೂ ಕಾರ್ಮಿಕರನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಕಾರ್ಕಳದ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ಶಂಕರಬೆಟ್ಟು ಎಂಬಲ್ಲಿನ ಸರ್ವೇ ನಂಬ್ರ 281ರ ಸರಕಾರಿ ಪಾದೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕಲ್ಲುಗಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣೆಯ ಎಸ್‌ಐ ದಿಲೀಪ್ ಜಿ ಆರ್ ಹಾಗೂ ಠಾಣಾ ಸಿಬ್ಬಂದಿಗಳು ಏ.12ರಂದು ಬೆಳಗ್ಗೆ ದಾಳಿ ನಡೆಸಿ,ಗಣಿಗಾರಿಕೆಗೆ ಬಳಸುತ್ತಿದ್ದ ಟಿಪ್ಪರ್ ಲಾರಿಗಳು, ಸುತ್ತಿಗೆಗಳು,ಚಾಣ ಸೇರಿ ಇತರೇ ಸಲಕರಣೆಗಳನ್ನು ವಶಪಡಿಸಿಕೊಂಡು, ಅಕ್ರಮವಾಗಿ ಕಲ್ಲು ತೆಗೆದು ಲಾರಿಗೆ ಲೋಡ್ ಮಾಡುತ್ತಿದ್ದ ತಿಮ್ಮರಾಯ, ಬಾಬು, ಸುರೇಶ ಮತ್ತು ಮಣಿಕಂಠ ಹಾಗೂಮಾಲಕ ಪ್ರಕಾಶ, ಟಿಪ್ಪರ್ ಚಾಲಕರಾದ ಸತೀಶ್ ಮತ್ತು ಮಹಮ್ಮದ್ ರಫೀಕ್ ಎಂಬವರನ್ನು ವಶಕ್ಕೆ ಪಡೆದು ಅವರ ವಿರುದ್ಧ ಕೇಸ್ ದಾಖಲಿಸಿದ್ದಾರೆ
ಕುಕ್ಕುಂದೂರು ಗ್ರಾಮದ ನಕ್ರೆ ಅಡ್ದಾಲು ವರ್ಣಬೆಟ್ಟು ಎಂಬಲ್ಲಿರುವ ಸರ್ವೆ ನಂಬ್ರ 245 ರ ಸರಕಾರಿ ಜಾಗದಲ್ಲಿ ಕ್ರೇನ್ ಬಳಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ ಶ್ರೀಧರ್ ಹಾಗೂ ಪಿಸಿ ಕಿರಣ್ ಕುಮಾರ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಚಾಲಕ ಟೆಂಪೋ ಚಾಲಕ ಗಣೆಶ್ ಎಂಬವರನ್ನು ವಶಕ್ಕೆ ಪಡೆದು, ಕ್ರೇನ್ ಹಾಗೂ ಟೆಂಪೋ ಸೇರಿದಂತೆ ಇತರೇ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ರೇನ್ ಮಾಲಕ ತುಳಸಿಮಣಿ,ಟೆಂಪೋ ಮಾಲಕ ಮಂಜೇಶ್ ಹಾಗೂ ಇನ್ನೋರ್ವ ಆರೋಪಿ ಗಣೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕು ಜಾರ್ಕಳ ಎಂಬಲ್ಲಿರುವ ಸರ್ವೆ ನಂಬ್ರ 181/1 ರಲ್ಲಿರುವ ಸರ್ಕಾರಿ ಜಾಗದ ಕಲ್ಲು ಕೋರೆ ಪ್ರದೇಶಕ್ಕೆ ಶಿರ್ವ ಪೊಲೀಸ್ ಠಾಣೆಯ ಎಸ್‌ಐ ಲೋಹಿತ್‌ಕುಮಾರ್ ಸಿ ಎಸ್, ಹಾಗೂ ಸಿಬ್ಬಂದಿಗಳಾದ ಸಿಹೆಚ್‌ಸಿ, ಕಿಶೋರ್, ಸಿಪಿಸಿ ಅನ್ವರ್ ಆಲಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಪರಾರಿಯಾಗಿದ್ದು, ಮಾಲಕ ಸುರೇಂದ್ರ ತಲೆಮರೆಸಿಕೊಂಡಿದ್ದಾನೆ.ಪೊಲೀಸರು ಕಲ್ಲುಗಣಿಗಾರಿಕೆ ನಡೆಸಲು ಉಪಯೋಗಿಸುತ್ತಿದ್ದ ಸಲಕರಣೆಗಳನ್ನು ವಶಪಡಿಸಿಕೊಂಡು ಕೇಸ್ ದಾಖಲಿಸಿಕೊಂಡಿದ್ದಾರೆ.
ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿರುವ ಸರ್ವೇ ನಂಬ್ರ 245 ರ ಸರಕಾರಿ ಸ್ಥಳದಲ್ಲಿ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದ ಕಾರ್ಕಳ ನಗರ ಪೊಲೀಸ್ ಠಾಣೆಯ ಎಸ್‌ಐ ಶಿವಕುಮಾರ್ ಎಸ್ ಆರ್, ಹಾಗೂ ಪಿಸಿ ಯತೀಶ್ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ನಡೆಸಿದಾಗ ಆರೋಪಿ ರಮೇಶ್ ಎಂಬಾತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಯಾವುದೇ ಪರವಾನಿಗೆ ಇಲ್ಲದೇ ಕಾರ್ಕಳ ತಾಲೂಕಿನಾದ್ಯಂತ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಕಾರ್ಕಳ ಎಎಸ್‌ಪಿ ಡಾ.ಹರ್ಷಾ ಪ್ರಿಯಂವದಾ ಬ್ರೇಕ್ ಹಾಕಲು ಮುಂದಾಗಿದ್ದು, ಕೋಟ್ಯಾಂತರ ರೂ ಸರ್ಕಾರಿ ರಾಜಧನ ಲೂಟಿ ಮಾಡುತ್ತಿರುವ ದಂಧೆ ಕೋರರಿಗೆ ಬಿಸಿಮುಟ್ಟಿಸಿದ್ದು, ಇನ್ನೂ ಸಾಕಷ್ಟು ಅಕ್ರಮ ಕಲ್ಲು ಗಣಿಗಾರಿಕೆ ಚಟುವಟಿಕೆಗಳಿಗೂ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

 

 

 

 

 

Leave a Reply

Your email address will not be published. Required fields are marked *