ಹುಬ್ಬಳ್ಳಿ: ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆಗೈದಿದ್ದ ಪ್ರಕರಣದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಬಿಹಾರ ಮೂಲದ ರಿತೇಶ್ ಕುಮಾರ್ ಮೃತ ಆರೋಪಿ. ರಿತೇಶ್ ಹುಬ್ಬಳ್ಳಿಯ ವಿಜಯನಗರದಲ್ಲಿನ ಮನೆಯೊಂದರ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ. ಬಾಲಕಿ ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಆಗ, ಅಧ್ಯಾಪಕ ನಗರದಲ್ಲಿನ ಖಾಲಿ ಜಾಗದಲ್ಲಿ ಬಾಲಕಿ ಶವ ಪತ್ತೆಯಾಗಿದೆ.
ಬಾಲಕಿ ಹೆತ್ತವರು ಕೂಲಿ ಕಾರ್ಮಿಕರಾಗಿದ್ದು, ತಂದೆ ಪೇಂಟಿAಗ್ ಕೆಲಸ, ತಾಯಿ ಮನೆಗೆಲಸ ಮಾಡುತ್ತಿದ್ದಾರೆ. ಮೃತ ಬಾಲಕಿಯ ತಾಯಿ ರವಿವಾರ (ಏ.13) ಮನೆಗೆಲಸಕ್ಕೆಂದು ವಿಜಯನಗರಕ್ಕೆ ಹೋಗಿದ್ದಾರೆ. ತಾಯಿ ಜೊತೆ ಬಾಲಕಿ ಕೂಡ ಹೋಗಿದ್ದಾಳೆ. ಅಲ್ಲಿ ತಾಯಿ ಮನೆಯೊಳಗೆ ಕೆಲಸ ಮಾಡುತ್ತಿದ್ದಾಗ, ಬಾಲಕಿ ಮನೆಯ ಹೊರಗಡೆ ಆಟವಾಡುತ್ತಿದ್ದಳು. ಈ ವೇಳೆ, ಇಲ್ಲಿಗೆ ಬಂದ ಆರೋಪಿ ರಿತೇಶ್ ಕುಮಾರ್ ಬಾಲಕಿಗೆ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಲು ಬಲೆ ಬೀಸಿದರು. ಆರೋಪಿ ಅಡಗಿರುವ ಸ್ಥಳದ ಮಾಹಿತಿ ತಿಳಿದ ಪೊಲೀಸರು ಆತನನ್ನು ಬಂಧಿಸಲು ತೆರಳಿದರು. ಈ ವೇಳೆ ಆರೋಪಿ ರಿತೇಶ್ ಕುಮಾರ್ ಪೊಲೀಸರ ಮೇಲೆ ದಾಳಿ ಮಾಡಿ, ಓಡಿ ಹೋಗಲು ಯತ್ನಿಸಿದ್ದ. ಆಗ ಆತ್ಮರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಪೊಲೀಸರು ಹಾರಿಸಿದ ಗುಂಡು ಆರೋಪಿ ರಿತೇಶ್ ಕುಮಾರ್ ಬೆನ್ನಿಗೆ ತಗುಲಿದೆ. ಕೂಡಲೆ, ಪೊಲೀಸರು ರಿತೇಶ್ ಕುಮಾರ್‌ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ರಿತೇಶ್ ಕುಮಾರ್ ಮೃತಪಟ್ಟಿದ್ದಾನೆ.