
ಬೆಂಗಳೂರು, ಮೇ 20: ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ‘ತಾಲಿಬಾನ್’ ಮತ್ತು ‘ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಪರವಾಗಿ ಯುವಕರನ್ನು ಪ್ರಚೋದಿಸಿ, ಸಂಘಟನೆಗೆ ನೇಮಕಾತಿ ಮಾಡುತ್ತಿದ್ದ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಮಹಾರಾಷ್ಟ್ರ ಮೂಲದ ಹಮ್ರಾಜ್ ವರ್ಶಿದ್ ಶೇಖ್‌ಗೆ ಬೆಂಗಳೂರಿನ NIA ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 63,000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
2019 ರಿಂದ 2022ರವರೆಗೂ ಸೌದಿ ಅರೇಬಿಯಾದಲ್ಲಿದ್ದ ಹಮ್ರಾಜ್, ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ಮೂಲದ ಕೆಲವರ ಸಂಪರ್ಕದಿಂದ ತಾಲಿಬಾನ್ ಮತ್ತು ಟಿಟಿಪಿ ಸಿದ್ಧಾಂತದಿಂದ ಪ್ರಚೋದನೆಗೊಂಡಿದ್ದ. ಈತನ ವಿಚಾರಣೆಯಲ್ಲಿ ಉಗ್ರ ಸಂಘಟನೆಗಳ ಹಂಝಲಾ ಎಂಬ ಆನ್‌ಲೈನ್ ಹ್ಯಾಂಡ್ಲರ್ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಈ ಹಂಝಲಾ ಎಂಬಾತ ಕಾಶ್ಮೀರ ಪೇಜ್ ಎಂಬ ಇನ್‌ಸ್ಟಾಗ್ರಾಂ ಖಾತೆ ಮೂಲಕ ಯುವಕರನ್ನು ಪ್ರಚೋದಿಸಿ ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸೌದಿಯಿಂದ ಭಾರತಕ್ಕೆ ಮರಳಿದ ಬಳಿಕ, ಹಮ್ರಾಜ್ ತನ್ನ ಸಹಚರ ಮೊಹಮ್ಮದ್ ಆರೀಫ್ ಜೊತೆಗೂಡಿ ಉಗ್ರ ಸಿದ್ಧಾಂತಗಳನ್ನು ಹರಡುವ ಕೆಲಸವನ್ನು ಮುಂದುವರಿಸಿದ್ದನು. ಮುಖ್ಯವಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಾಗೂ ದುರ್ಬಲ ಮನಸ್ಥಿತಿಯ ಯುವಕರನ್ನು ಗುರಿಯಾಗಿಸಿಕೊಂಡು, ಅವರನ್ನು ತಾಲಿಬಾನ್ ಮತ್ತು ಟಿಟಿಪಿ ಸಂಘಟನೆಗಳಿಗೆ ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಭಾರತದ ವಿರುದ್ಧ ಜಿಹಾದ್ ನಡೆಸಲು ಪ್ರತ್ಯೇಕ ತಂಡವನ್ನು ಸಿದ್ಧಪಡಿಸುವ ಗಂಭೀರ ಸಂಚನ್ನು ಇವರು ರೂಪಿಸಿದ್ದರು ಎಂದು NIA ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ವಿವರಿಸಿದೆ.
ತನಿಖೆಯ ಹಂತದಲ್ಲಿ ಹಮ್ರಾಜ್ ಶೇಖ್ ತನ್ನ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಇರುವುದನ್ನು ಅರಿತು ನ್ಯಾಯಾಲಯದ ಮುಂದೆ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದನು. ಆರೋಪಿಯ ತಪ್ಪೊಪ್ಪಿಗೆ ಮತ್ತು ಎನ್‌ಐಎ ಮಂಡಿಸಿದ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಲಯವು, ಈ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣವು ಡಿಜಿಟಲ್ ಪ್ಲಾಟ್‌ಫಾರ್ಮ್ಗಳನ್ನು ಬಳಸಿಕೊಂಡು ಉಗ್ರ ಸಂಘಟನೆಗಳು ಯುವಕರನ್ನು ದಾರಿ ತಪ್ಪಿಸುತ್ತಿರುವ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.



.
.
.
.
.
.
.
.
.
.
.
.
.
.
.
.
.
.
.
.
