ಶ್ರೀನಗರ: ಜಮ್ಮುಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಯಲ್ಲಿ ಶಿವಮೊಗ್ಗದ ಓರ್ವ ಸೇರಿ 30ಕ್ಕೂ ಅಧಿಕ ಪ್ರವಾಸಿಗರು ಬಲಿಯಾಗಿ, 12ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಶಿವಮೊಗ್ಗದ ಉದ್ಯಮಿ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಎಂಬವರು ಉಗ್ರರ ದಾಳಿಯಲ್ಲಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದು ಹಿಂದೂಗಳನ್ನೇ ಗುರಿಯಾಗಿಸಿ ನಡೆಸಿದ ದಾಳಿಯಾಗಿದೆ ಎನ್ನುವ ಸ್ಪೋಟಕ ಮಾಹಿತಿ ಲಭಿಸಿದೆ.
ಉಗ್ರರ ಭೀಕರ ನರಮೇಧದ ಕುರಿತು ಕೇಂದ್ರ ಸರ್ಕಾರದ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ.ಘಟನೆ ಸಂಬಂಧ ಪ್ರಧಾನಿ ಮೋದಿಯವರು ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತನಾಡಿದ್ದು, ಕೂಡಲೇ ಕಾಶ್ಮೀರಕಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ. ಇನ್ನು, ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪ್ರವಾಹ ಪೀಡಿತ ಸ್ಥಳಗಳ ಪರಿಶೀಲನೆಗೆ ತೆರಳಿದ್ದ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಶ್ರೀನಗರಕ್ಕೆ ವಾಪಸ್ ಆಗಿದ್ದಾರೆ.
ಅಮಿತ್ ಶಾ ಸಂತಾಪ
“ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ದುಃಖಿತನಾಗಿದ್ದೇನೆ. ಮೃತರ ಕುಟುಂಬ ಸದಸ್ಯರ ಜತೆಗೆ ನಾವಿದ್ದೇವೆ. ಈ ಭೀಕರ ಭಯೋತ್ಪಾದಕ ಕೃತ್ಯ ನಡೆಸಿದ ಉಗ್ರರನ್ನು ಬಿಡುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘಟನೆಯ ಬಗ್ಗೆ ವಿವರಿಸಲಾಯಿತು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಲಾಯಿತು. ಎಲ್ಲಾ ಸಂಸ್ಥೆಗಳೊಂದಿಗೆ ತುರ್ತು ಭದ್ರತಾ ಪರಿಶೀಲನಾ ಸಭೆ ನಡೆಸುತ್ತೇವೆ.” ಎಂದಿದ್ದಾರೆ.
ಈಗಾಗಲೇ ಕರ್ನಾಟಕದಿಂದ ಅಧಿಕಾರಿಗಳು ಹಾಗೂ ಪೊಲೀಸರು ಸಹ ಕಾಶ್ಮೀರದತ್ತ ಹೊರಟ್ಟಿದ್ದಾರೆ.