ಉಡುಪಿ: ಉಡುಪಿ ಸೇರಿ ದೇಶದ 4 ಕಡೆಗಳಿಂದ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲವನ್ನು ಬೇಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಉಡುಪಿಯಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಜಾಲ ಕಾರ್ಯಾಚರಣೆ ಶಂಕೆ ವ್ಯಕ್ತವಾಗಿದ್ದು, 8 ಜನರನ್ನು ಬಂಧಿಸಲಾಗಿದೆ. ಕಾಲ್ ಸೆಂಟರ್ನಂತೆ ಕಾರ್ಯನಿರ್ವಹಿಸುತ್ತಿದ್ದ ಈ ಜಾಲವು ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಿಗೆ ಮಾದಕವಸ್ತು ಪೂರೈಸುತ್ತಿತ್ತು ಎಂದು ಶಂಕಿಸಲಾಗಿದೆ. ಉಡುಪಿಯಲ್ಲಿಯೂ ಕಾಲ್ ಸೆಂಟರ್ ಇದ್ದ ಶಂಕೆ ವ್ಯಕ್ತವಾಗಿದೆ.
ಭಾರತೀಯ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ (NCB) ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವನ್ನು ಬೇಧಿಸಿದ್ದು, ತಮಿಳು ಮೂಲದ ಆರೋಪಿ ಜಾಯಲ್ ಅಲ್ಬಾ ಎಂಬಾತನನ್ನು ಎನ್ಸಿಬಿ ಅಧಿಕಾರಿಗಳು ಉಡುಪಿಯಲ್ಲಿ ಬಂಧಿಸಿದ್ದಾರೆ.
ಭಾರತದ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ ಕಳೆದ ಮೇ ತಿಂಗಳಲ್ಲಿ ‘ಆಪರೇಷನ್ ಮೇಡ್ ಮ್ಯಾಕ್ಸ್’ ಹೆಸರಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಭಾರತ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳು ಮತ್ತು ನಾಲ್ಕು ಖಂಡಗಳಲ್ಲಿ ಕಾರ್ಯಚರಣೆಗೆ ಇಳಿದಿತ್ತು.
ದೆಹಲಿ, ಜೈಪುರ, ಉಡುಪಿ ಹಾಗೂ ರೂರ್ಕಿ ಎಲ್ಲಿ ನಡೆಸಿದ್ದ ಕಾರ್ಯಾಚರಣೆ ಬಗ್ಗೆ ಟ್ವೀಟ್ ಮಾಡುವ ಮೂಲಕ ಗ್ರಹ ಸಚಿವ ಅಮಿತ್ ಶಾ ಖಚಿತಪಡಿಸಿದ್ದರು. ಉಡುಪಿ ಸೇರಿದಂತೆ ನಾಲ್ಕು ಪಟ್ಟಣಗಳಿಂದ ಆರೋಪಿಗಳನ್ನು ಎನ್ಸಿಬಿ ವಶಕ್ಕೆ ಪಡೆದಿತ್ತು. ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ಕಾಲ್ ಸೆಂಟರ್ ಮಾದರಿಯಲ್ಲಿ ಕಾರ್ಯಾಚರಿಸುತ್ತಿದ್ದ ಶಂಕೆ ವ್ಯಕ್ತವಾಗಿತ್ತು.
ವಿದೇಶಗಳಲ್ಲಿ ನಿಷೇಧಿತ ಔಷಧಿ (ನಾರ್ ಕೋಟಿಕ್ಸ್ ಒಳಗೊಂಡ) ಪೂರೈಸುವ ಜಾಲ ಇದಾಗಿದ್ದು, ಆನ್ಲೈನ್ಜಾಹೀರಾತು ಮತ್ತು ಫೋನ್ ಸಂಖ್ಯೆ ಹಂಚಿ ವಿದೇಶಗಳಲ್ಲಿ ಡ್ರಗ್ಸ್ ವಿತರಣೆ ಮಾಡಲಾಗುತ್ತಿತ್ತು. ಗ್ರಾಹಕರ ಕರೆಗಳನ್ನು ಸ್ವೀಕರಿಸಲು ಉಡುಪಿಯಲ್ಲಿ ಕಾಲ್ ಸೆಂಟರ್ ಇದ್ದ ಅನುಮಾನಗಳು ಮೂಡಿವೆ. ಉಡುಪಿಯಲ್ಲಿ ತಮಿಳು ಮೂಲದ ವ್ಯಕ್ತಿಯ ಮೂಲಕ ಕಾರ್ಯಾಚರಣೆ ನಡೆದಿತ್ತು. ಸದ್ಯ ಆತನ ಬಂಧನವಾಗಿದೆ. ದೆಹಲಿ ಮೂಲಕ ಇತರ ದೇಶಗಳಿಗೆ ಡ್ರಗ್ಸ್ ಸರಬರಾಜಾಗುತ್ತಿತ್ತು. ಒಂದು ತಿಂಗಳ ಹಿಂದೆ ಎನ್ಸಿಬಿ ಅಧಿಕಾರಿಗಳಿಂದ ದೆಹಲಿ ಮೂಲದ ಮುಖ್ಯಸ್ಥ ನನ್ನು ಬಂಧಿಸಲಾಗಿತ್ತು.