ಬೆಂಗಳೂರು: ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ವರುಣನ ಕೃಪೆಗೆ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿರುವ ರೈತ ಗೊಬ್ಬರ ಕೊರತೆಯಿಂದ ಕಂಗಾಲಾಗಿದ್ದಾನೆ.
ಈ ನಡುವೆ ಕೇಂದ್ರ ಸರ್ಕಾರ ಗೊಬ್ಬರ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪ. ಕೊಟ್ಟ ಗೊಬ್ಬರವನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಬಿಜೆಪಿ ತಿರುಗೇಟು.ಮಳೆ ಬಿದ್ದ ಖುಷಿಯಲ್ಲಿ ಗೊಬ್ಬರ ಖರೀದಿಗೆ ಬಂದ ರೈತರಿಗೆ ಇನ್ನೂ ಗೊಬ್ಬರ ಸಿಕ್ಕಿಲ್ಲ. ಹೀಗಾಗಿ ಇಂದು ಬಿಜೆಪಿ ರೈತ ಮೋರ್ಚಾ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಜಿಲ್ಲೆ ಜಿಲ್ಲೆಯಲ್ಲೂ ಪ್ರತಿಭಟಿಸಲಿದ್ದಾರೆ.
ಅಂದಹಾಗೆ ಯೂರಿಯಾ ಜೊತೆ ನ್ಯಾನೋ ಯೂರಿಯಾ ಖರೀದಿ ಮಾಡಬೇಕೆಂಬ ಕಡ್ಡಾಯ ನಿಮಯವಿದೆ. ಆದರೆ, ರೈತರು ನ್ಯಾನೋ ಯೂರಿಯಾ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಯೂರಿಯಾವನ್ನು ನಾವು ಮಾರಾಟ ಮಾಡುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ನ್ಯಾನೋ ಯೂರಿಯಾ ಕಡ್ಡಾಯ ನಿಯಮ ಹಿಂಪಡೆಯಲು ಮನವಿ ಮಾಡಿದ್ದಾರೆ.
ಉತ್ತಮ ಮಳೆ ಬಂದರೂ ಗೊಬ್ಬರವಿಲ್ಲ, ಬೆಳೆ ಕೈತಪ್ಪುವ ಭಯ, ಬಿತ್ತನೆ ಸಮಯ ಮುಗಿದು ಹೋಗುವ ಭೀತಿ. ಕೇಂದ್ರ ಗೊಬ್ಬರ ಪೂರೈಸಿದರೂ ರಾಜ್ಯ ಸರ್ಕಾರ ಕೊಡುತ್ತಿಲ್ಲವೇ? ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದಲೇ ಸರಬರಾಜು ಆಗುತ್ತಿಲ್ಲವೇ? ಏನೇನೂ ಮಾಹಿತಿ ಸಿಗದ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಅನ್ನದಾತನ ಭಯಕ್ಕೆ ಆತ್ಮಸ್ಥೈರ್ಯ ತುಂಬಬೇಕಿದ್ದ ನಾಯಕರು ಮಾತ್ರ ಕೊರತೆ ವಿಚಾರವಾಗಿ ಗೊಬ್ಬರ ಗುದ್ದಾಟದಲ್ಲಿ ತೊಡಗಿದ್ದಾರೆ.