

ಮಂಗಳೂರು ಜು.29: ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಅನಾಮಿಕ ವ್ಯಕ್ತಿಯ ಹೇಳಿಕೆ ಆಧಾರದಲ್ಲಿ ಸೋಮವಾರ ಎಸ್ಐಟಿ ತಂಡವು ಅನಾಮಿಕ ವ್ಯಕ್ತಿಯ ಜೊತೆ ಶವಗಳಿಗಾಗಿ ಹುಡುಕಾಟ ನಡೆಸಿದೆ. ಶವಗಳನ್ನು ಹೂತು ಹಾಕಿರುವುದಾಗಿ ಹೇಳಲಾದ ಸ್ಥಳಗಳಲ್ಲಿ ಮಹಜರು ನಡೆಸಲಾಗಿದ್ದು, ಒಟ್ಟು 13 ಜಾಗಗಳನ್ನು ಅನಾಮಿಕ ದೂರುದಾರ ತೋರಿಸಿದ್ದಾರೆ.
ವಿಶೇಷ ತನಿಖಾ ತಂಡ ಸೋಮವಾರ ಸಂಜೆ 6 ಗಂಟೆ ತನಕ ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಮಹತ್ವದ ಮಹಜರು ಕಾರ್ಯ ನಡೆಸಿತು. ದೂರುದಾರ ಅನಾಮಿಕ ವ್ಯಕ್ತಿಯನ್ನು ಮುಸುಕುಧಾರಿಯಾಗಿ ಕರೆತಂದ ಎಸ್ಐಟಿ ತಂಡ ಬೆಳಗ್ಗಿನಿಂದ ಸಂಜೆಯವರೆಗೂ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶದ ನಿಗೂಢ ಸ್ಥಳಗಳಿಗೆ ಕರೆದೊಯ್ದು ಮಹಜರು ಕಾರ್ಯ ನಡೆಸಿತು.
ಈ ಜಾಗಗಳಲ್ಲಿ ರಾತ್ರಿಯಿಡಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಇಂದೂ ಕೂಡ ಮಹಜರು ಕಾರ್ಯ ಮುಂದುವರಿಯುವ ಸಾಧ್ಯತೆಗಳಿದ್ದು, ಗುರುತಿಸಲಾದ ಸ್ಥಳಗಳಲ್ಲಿ ಅಗೆದು ಶವಗಳ ಪಳೆಯುಳಿಕೆಗಾಗಿ ಎಸ್ಐಟಿ ತಂಡವು ಹುಡುಕಾಟ ನಡೆಸಲಿದೆ ಎನ್ನುವ ಮಾಹಿತಿ ಲಭಿಸಿದೆ.



