ನವದೆಹಲಿ, ಆ 08:ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಮತ ಕಳ್ಳತನವಾಗಿದೆ ಎನ್ನುವ ರಾಹುಲ್ ಗಾಂಧಿ ಆರೋಪಗಳಿಗೆ ಕೇಂದ್ರ ಚುನಾವಣಾ ಆಯೋಗ ತಿರುಗೇಟು ನೀಡಿದೆ.ರಾಹುಲ್ ಗಾಂಧಿ ಆರೋಪಗಳು ಹಾಗೂ ತಮ್ಮ ಹೇಳಿಕೆಗಳನ್ನು ದೃಢೀಕರಿಸುವ ಔಪಚಾರಿಕ ಘೋಷಣೆಗೆ ಸಹಿ ಹಾಕಲಿ ಅಥವಾ ರಾಷ್ಟ್ರದ ಕ್ಷಮೆಯಾಚಿಸಲಿ ಎಂದು ಸವಾಲೆಸೆದಿದೆ.
ರಾಹುಲ್ ಗಾಂಧಿ ತಮ್ಮ ಹೇಳಿಕೆಗಳಿಗೆ ಬದ್ಧರಾಗಿ ಆಯೋಗದ ವಿರುದ್ಧ ವಿರುದ್ಧದ ಆರೋಪಗಳು ನಿಜವೆಂದಾದರೆ ಘೋಷಣೆಗೆ ಸಹಿ ಹಾಕಲು ಅವರಿಗೆ ಯಾವುದೇ ಸಮಸ್ಯೆ ಇರಬಾರದು. ಅವರು ಸಹಿ ಮಾಡದಿದ್ದರೆ, ಅವರು ತಮ್ಮ ಸ್ವಂತ ತೀರ್ಮಾನಗಳು ಮತ್ತು ಅಸಂಬದ್ಧ ಆರೋಪಗಳನ್ನು ನಂಬುವುದಿಲ್ಲ ಎಂದರ್ಥ. ಹಾಗಿದ್ದಲ್ಲಿ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00,000 ಕ್ಕೂ ಹೆಚ್ಚು ಮತಗಳನ್ನು ಕದಿಯಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ. 40 ಸದಸ್ಯರ ತಂಡವು ಆರು ತಿಂಗಳ ವಿಶ್ಲೇಷಣೆಯಲ್ಲಿ ಸಾವಿರಾರು ನಕಲಿ ನಮೂದುಗಳು, ನಕಲಿ ವಿಳಾಸಗಳು, ಅಮಾನ್ಯ ಫೋಟೋಗಳು ಮತ್ತು ಅನುಮಾನಾಸ್ಪದ ಫಾರ್ಮ್ 6 ಅರ್ಜಿಗಳನ್ನು ಬಹಿರಂಗಪಡಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.