

ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತಿದ್ದಾಗಿ ಹೇಳಿದ್ದ ಆರೋಪಿ ಚಿನ್ನಯ್ಯ ಬಂಧನವಾಗಿದ್ದು, ಕ್ಷಣ ಕ್ಷಣಕ್ಕೂ ಹೊಸ ಅಂಶ ಆಚೆ ಬರುತ್ತಿದೆ. ಸದ್ಯ ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿರುವ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು, ಚಿನ್ನಯ್ಯ ಕೋರ್ಟ್ ತೆಗೆದುಕೊಂಡು ಹೋಗಿದ್ದ ಮಾನವನ ತಲೆ ಬುರುಡೆ ಬಗ್ಗೆ ತನಿಖೆ ನಡೆಸಿದ್ದಾರೆ. ಬುರುಡೆ ಟೀಂ ಧರ್ಮಸ್ಥಳ ಗ್ರಾಮದ ಒಂದು ನಿಗೂಢ ಜಾಗದಲ್ಲಿ ತಲೆ ಬುರುಡೆಯನ್ನು ಹೂತು ಚಿನ್ನಯ್ಯಗೆ ಮಾಹಿತಿ ನೀಡಿತ್ತು. ಉತ್ಖನನದ ವೇಳೆ ಆ ಜಾಗವನ್ನು ತೋರಿಸುವ ಪ್ಲ್ಯಾನ್ ಕೂಡ ಮಾಡಲಾಗಿತ್ತು. ಇದರ ಬಗ್ಗೆಯೂ ಎಸ್ಐಟಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ವಿಶೇಷ ತನಿಖಾ ತಂಡ (ಎಸ್ಐಟಿ) ಚಿನ್ನಯ್ಯನನ್ನು ಈತನ ಕುರಿತು ಮಾಹಿತಿ ಸಂಗ್ರಹಿಸಲು ಮಂಡ್ಯ ಹಾಗೂ ತಮಿಳುನಾಡಿಗೆ ಭೇಟಿ ನೀಡಿದೆ ಎಂದು ತಿಳಿದುಬಂದಿದೆ. ಪ್ರಕರಣದ ಸಾಕ್ಷಿ ಹಾಗೂ ದೂರುದಾರ ವ್ಯಕ್ತಿ ಮಂಡ್ಯ ಹಾಗೂ ತಮಿಳುನಾಡಿನಲ್ಲಿ ವಾಸವಿದ್ದ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳ ತಂಡ ಮಂಡ್ಯ ಮತ್ತು ತಮಿಳುನಾಡಿಗೆ ಭೇಟಿ ನೀಡಿ, ಈತನ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಇದರ ನಡುವೆ ಯುಟ್ಯೂಬರ್ ಸಮೀರ್ ವಿರುದ್ಧವೂ ಬೆಳ್ತಂಗಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ದೊಂಬಿ ಮಾಡುವ ಉದ್ದೇಶದಿಂದ ವಿಡಿಯೋ ಮಾಡಿದ ಆರೋಪದಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಶುಕ್ರವಾರ ಸಮೀರ್ ಬಂಧನಕ್ಕೆ ಮುಂದಾಗಿದ್ದರು. ಆದರೆ, ನಿರೀಕ್ಷಣಾ ಜಾಮೀನು ಪಡೆದಿದ್ದ ಸಮೀರ್ ಅಜ್ಞಾತವಾಗಿದ್ದ.ಹೀಗಾಗಿ, ಪೊಲೀಸರು ಶನಿವಾರ ಆತನ ಬೆಂಗಳೂರು ಹಾಗೂ ಬಳ್ಳಾರಿ ನಿವಾಸಕ್ಕೆ ತೆರಳಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದರು. ಹೀಗಾಗಿ, ಆ.24 ರಂದು ಸಮೀರ್ ಪೊಲೀಸರ ವಿಚಾರಣೆಗೆ ಹಾಜರಾಗಿದ್ದನು. ಮೂವರು ವಕೀಲರ ಸಮೇತ, ದಾಖಲೆ ಹಿಡಿದು ವಿಚಾರಣೆಗೆ ಬಂದಿದ್ದ.ಸಮೀರ್ ತನ್ನ ‘ಧೂತ’ ಎಂಬ ಯೂಟ್ಯೂಬ್ ಚಾನಲ್ನಲ್ಲಿ ಧರ್ಮಸ್ಥಳ ದೇವಸ್ಥಾನದ ವಿರುದ್ಧ ಸಂಚಲನಾತ್ಮಕ ಆರೋಪಗಳನ್ನು ಮಾಡಿ, AI ತಂತ್ರಜ್ಞಾನದಿಂದ ರಚಿಸಿದ ವಿಡಿಯೋವನ್ನು ಪ್ರಕಟಿಸಿದ್ದ.














