

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ ಘಟನೆಯ ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ‘ನಮಸ್ತೇ ಸದಾ ವತ್ಸಲೇ’ ಎಂದು ಆರ್‌ಎಸ್‌ಎಸ್ ಗೀತೆ ಹಾಡಿರುವುದು ಈಗ ಕಾಂಗ್ರೆಸ್ ಆಂತರಿಕ ವಲಯದಲ್ಲಿ ತೀವೃ ಅಸಮಧಾನಕ್ಕೆ ಕಾರಣವಾಗಿದೆ. ಡಿಕೆ ಶಿವಕುಮಾರ್ ಅವರ ಈ ನಡೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿಡಿಮಿಡಿಗೊಂಡಿದ್ದಾರೆ. ಅವರು ಏನು ಬೇಕಾದರೂ ಮಾಡಬಹುದು ಎಂದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಕೂಡ ಟ್ವೀಟ್ ಮಾಡಿದ್ದು, ಆರ್‌ಎಸ್‌ಎಸ್‌ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು ಎಂದು ಬರೆದುಕೊಂಡಿದ್ದಾರೆ.
ಇನ್ನು ಸಚಿವ ಸತೀಶ್ ಜಾರಕಿಹೊಳಿ ‘‘ಬಿಜೆಪಿಗೆ ಹೋಗ್ತಾರಂತಲ್ಲ’’ ಎಂದು ಪ್ರತಿಕ್ರಿಯಿಸಿದ್ದರೆ, ಡಿಕೆ ಸಂಸ್ಕೃತ ಪಂಡಿತರು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಆರ್‌ಎಸ್‌ಎಸ್ ಎಂಬುದು ಬಿಜೆಪಿಯ ಸಂಸ್ಥೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.ಮತ್ತೊಂದೆಡೆ, ಕೆಲವು ಮಂದಿ ಕಾಂಗ್ರೆಸ್ ನಾಯಕರು ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅನ್ಯಥಾ ಭಾವಿಸಬಾರದು ಎಂದಿದ್ದಾರೆ.
ಪ್ರತಿಪಕ್ಷ ಬಿಜೆಪಿ ಮಾತ್ರ ಡಿಕೆ ಶಿವಕುಮಾರ್ ನಡೆಯನ್ನು ಸ್ವಾಗತಿಸಿದೆ. ಈ ಬಗ್ಗೆ ಮಾತನಾಡಿರುವ ಶಾಸಕ ಅಶ್ವತ್ಥ್ ನಾರಾಯಣ್, ಅವರ ಪಕ್ಷಕ್ಕೆ ತಿಳಿಸಿದಂತಾಗುತ್ತದೆ ಎಂದಿದ್ದಾರೆ.
ಒಟ್ಟಿನಲ್ಲಿ, ಡಿಕೆ ಶಿವಕುಮಾರ್ ಸಂಘ ಗೀತೆ ಹಾಡಿರುವುದು ಹಗಲೂ ರಾತ್ರಿ ಸಂಘದ ಸಿದ್ಧಾಂತಗಳನ್ನು ಕಿತ್ತು ಎಸೆಯಬೇಕು ಎಂದು ಬಯಸುವ ಕಾಂಗ್ರೆಸ್ ನಾಯಕರಿಗೆ ಡಿಕೆ ಪ್ರಾರ್ಥನೆಯ ವೈಖರಿ ಬಿಸಿ ತುಪ್ಪದಂತಾಗಿರುವುದು ನಿಜ.














