ಬೆಳ್ತಂಗಡಿ, ಆ.26 : ಧರ್ಮಸ್ಥಳದಲ್ಲಿ ಅಸ್ಥಿಪಂಜರ ಶೋಧ ಪ್ರಕರಣಕ್ಕೆ ಕುರಿತಂತೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಎಸ್ಐಟಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಆರೋಪಿ ಚೆನ್ನಯ್ಯನನ್ನು ಕರೆದೊಯ್ದು ಶೋಧ ಕಾರ್ಯ ನಡೆಸಿದ್ದಾರೆ.ಈ ವೇಳೆ ತಿಮರೋಡಿ ಮನೆಯಲ್ಲಿ ಚೆನ್ನಯ್ಯನ ಮೊಬೈಲ್ ಪತ್ತೆಯಾಗಿದೆ.ಇದಲ್ಲದೇ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ಸಿಸಿಟಿವಿ ಹಾರ್ಡ್ ಡಿಸ್ಕ್ ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಯ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
ತಿಮರೋಡಿ ಮನೆಯಲ್ಲಿ ಚಿನ್ನಯ್ಯನಿಗೆ ಆಶ್ರಯ ನೀಡಿದ ಶಂಕೆ ಇದ್ದು, ಈತ ಇದೇ ಮನೆಯಿಂದ ನಾನಾ ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದ. ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ಪಡೆಯಲಾಗಿದೆ.
ಒಂದೆಡೆ ಸುಜಾತಾ ಭಟ್ ಇಂದು ಬೆಳಗ್ಗೆಯೇ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಎರಡು ದಿನದಿಂದ ಸಮೀರ್ ಎಂಡಿ ವಿಚಾರಣೆ ಕೂಡಾ ನಡೆಯುತ್ತಿದೆ. ಚಿನ್ನಯ್ಯ ಎಸ್ ಐಟಿ ಕಸ್ಟಡಿಯಲ್ಲಿದ್ದು, ಆತ ಸಂಚಿನ ಹಿಂದೆ ಇರುವವರ ಬಗ್ಗೆ ಬಾಯಿ ಬಿಡುತ್ತಿದ್ದಂತೆ ಬುರುಡೆ ಗ್ಯಾಂಗ್ ಹಿಂದಿರುವವರಿಗೆ ನಡುಕ ಹುಟ್ಟಿಸಿದ್ದು, ಈತನಿಗೆ ಆಶ್ರಯ ಕೊಟ್ಟಿದ್ದ ತಿಮರೋಡಿಗೂ ಈಗ ಸಂಕಷ್ಟ ಎದುರಾಗಿದೆ.