ಬ್ರಹ್ಮಾವರ, ಸೆ.12: ಮದುವೆಗೆ ನಿರಾಕರಿಸಿದ ಕಾರಣಕ್ಕೆ ತಾನು ಪ್ರೀತಿಸಿದ ಪಕ್ಕದ ಮನೆಯ ಯುವತಿಯನ್ನು ಚೂರಿಯಿಂದ ಇರಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಳಿಸಿದ ಘಟನೆ ಇಂದು (ಸೆ.12) ಬೆಳಿಗ್ಗೆ ಕೊಕ್ಕರ್ಣೆಯಲ್ಲಿ ನಡೆದಿದೆ.
ಗಾಯಗೊಂಡ ಯುವತಿಯನ್ನು ರಕ್ಷಿತಾ (20ವ) ಎಂದು ಗುರುತಿಸಲಾಗಿದೆ. ಭಗ್ನ ಪ್ರೇಮಿಯ ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ರಕ್ಷಿತಾಗೆ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಿಗ್ಗೆ 8:30ಕ್ಕೆ ರಕ್ಷಿತಾ ಮಣಿಪಾಲದಲ್ಲಿ ಕೆಲಸಕ್ಕೆ ಹೋಗಲೆಂದು ಮನೆಯಿಂದ ಬರುವಾಗ ಕಾರ್ತಿಕ್ ಪೂಜಾರಿ ಎಂಬಾತ ಬೈಕಿನಲ್ಲಿ ಬಂದು ಏಕಾಏಕಿ ಚಾಕುವಿನಿಂದ ಚುಚ್ಚಿದ್ದಾನೆ. ಬಳಿಕ ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.