ಮೈಸೂರು, ಸೆ 23: ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ವಿಶೇಷ ಮಹಿಳಾ ದಸರಾವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಮಹಿಳೆಯರಿಗೆ ಬ್ಯಾಂಕ್ ಗಳಿಂದ ಸರಿಯಾಗಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಇದರ ಪರಿಣಾಮ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಆರಂಭಿಸಲು ಚಿಂತನೆ ನಡೆಸಿದೆ. ಈ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಲಾಗುವುದು ಎಂದು ಹೇಳಿದರು.
ಮಹಿಳೆಯರ ಸ್ವಾಭಿಮಾನ, ಸಮೃದ್ಧಿ, ತಾಳ್ಮೆ, ಶಕ್ತಿಯ ಪ್ರತೀಕವೇ ದಸರಾ ಹಬ್ಬ. ನವ ದೇವಿಯ ಆರಾಧನೆ ಮಾಡಿ. ದುಷ್ಟರ ವಿರುದ್ಧ ಶಿಷ್ಟರ ರಕ್ಷಣೆ ಮಾಡುವ ದೇವಿಯ ಆರಾಧನೆ ಮಾಡುವುದೇ ವಿಜಯ ದಶಮಿ. ಇಡೀ ವಿಶ್ವಕ್ಕೆ ಸಂಸ್ಕೃತಿಯ ರುಚಿಯನ್ನು ಕೊಟ್ಟವರು ಮಹಿಳೆಯರು. ಹಿಂದೆ ರಾಜರು ಆಳ್ವಿಕೆ ಮಾಡುತ್ತಿದ್ದರು. ಆದರೆ ಈಗ ಸರ್ಕಾರ ಬಹಳ ವಿಜೃಂಭಣೆಯಿಂದ ದಸರಾ ಆಚರಿಸುತ್ತಾ ಬರುತ್ತಿದೆ ಎಂದರು.
ಐಸಿಡಿಎಸ್ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರ ಆರಂಭವಾಗಿ ಐವತ್ತು ವರ್ಷ ಆಗಿದ್ದು, ಇದೀಗ ಸುವರ್ಣ ಮಹೋತ್ಸವ ಕಾರ್ಯಕ್ರಮ ಮಾಡಲು ಚಿಂತನೆ ನಡೆದಿದೆ. ಎಲ್ ಕೆಜಿ, ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿಯನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಮಹೇಶ್ ಬಾಬು, ಮಹಿಳಾ ದಸರಾ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಸವಿತಾ.ಬಿ.ಎಂ, ಮಹಿಳಾ ದಸರಾ ಸಮಿತಿಯ ಲತಾ ಮೋಹನ್,ಶಿಲ್ಪಶ್ರೀ, ಮಂಜುಳಾ ಮಂಜುನಾಥ್, ವರಲಕ್ಷ್ಮೀ, ಶಶಿ ರೇಖಾ, ಮಾಲೇಗೌಡ, ಲತಾ ಜಗದೀಶ್ ಸೇರಿದಂತೆ ಮಹಿಳಾ ದಸರಾ ಉಪ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.