Share this news

ಬೆಂಗಳೂರು,ಸೆ 24: ಕನ್ನಡದ ಖ್ಯಾತ ಕಾದಂಬರಿಕಾರ, ಚಿಂತಕ, ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ (94) ಅವರು ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದ ಅವರು ತಮ್ಮ ಕೃತಿಗಳ ಮೂಲಕ ಕನ್ನಡದ ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಭೈರಪ್ಪನರು ಹುಟ್ಟಿದ್ದು 1931ರ ಆಗಸ್ಟ್ 20ರಂದು ಚನ್ನರಾಯಪಟ್ಟಣದ ಬಳಿಯ ಸಂತೆಶಿವರ ಎಂಬ ಗ್ರಾಮದಲ್ಲಿ. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರ ಈ ಎಲ್ಲಾ ಪ್ರತಿಕೂಲ ಸಂದರ್ಭಗಳ ನಡುವೆಯೂ ಸಣ್ಣವಯಸ್ಸಿನಿಂದಲೇ ತಮ್ಮ ತಾಯಿಯಲ್ಲಿದ್ದ ಧೀಮಂತಿಕೆಯನ್ನು ಮೈಗೂಡಿಸಿಕೊಂಡರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಾವು ಹುಟ್ಟಿದ ಹಳ್ಳಿಯಲ್ಲಿ ಹಾಗೂ ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಭೈರಪ್ಪನವರು ಸಾಗಿಸಿದರು. ಆಗ ಅವರ ಹಳ್ಳಿಯಲ್ಲಿ ಓದಲು ಅನುಕೂಲವಿರಲಿಲ್ಲ. ಅವರ ತಾಯಿ ಅವರನ್ನು ತಮ್ಮ ಸೋದರಮಾವನ ಬಳಿ ಕಲಿಯಲು ಬಿಟ್ಟಿದ್ದರು. ಇಂತಹ ಮಹಾನ್‌ ಲೇಖಕನಿಗೆ ಪದ್ಮಭೂಷಣ ಪ್ರಶಸ್ತಿ, ಸರಸ್ವತಿ ಸಮ್ಮಾನ್, ಕೇಂದ್ರ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ರೀತಿಯ ಮನ್ನಣೆಗಳು ದೊರೆತಿವೆ. ಆದರೆ ಅವರು ಎಲ್ಲಾ ಪ್ರಶಸ್ತಿಗಳಿಗಿಂತ ಮೇಲ್ಮಟ್ಟದಲ್ಲಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ. ಪ್ರಶಸ್ತಿಗಳು ಕೇವಲ ಒಂದೆರಡು ದಿನದ ಉತ್ಸವಗಳು. ಆದರೆ ಓದುಗರ ಹೃದಯಾಂತರಾಳವನ್ನು ಅಪಾರವಾಗಿ ಆಕ್ರಮಿಸಿಕೊಂಡಿರುವ ಮತ್ತೊಬ್ಬ ಬರಹಗಾರರು ಕನ್ನಡದಲ್ಲಿ ಮಾತ್ರವಲ್ಲ ಭಾರತದದಲ್ಲಿ ಬೇರೆಲ್ಲೂ ಇಲ್ಲ. ಭೈರಪ್ಪನವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ಮಾಡುವ ಪೂರ್ವಭಾವಿ ತಯಾರಿ, ನಡೆಸುವ ಅಧ್ಯಯನ, ವ್ಯಾಪಕ ಸಂಚಾರ, ಕಂಡುಕೊಳ್ಳುವ ಅನುಭವ ಇದೆಲ್ಲವೂ ಬಹಳ ವಿಶಿಷ್ಟವಾದವು. ಮಹಾಭಾರತದ ಬಗೆಗಿನ ಪರ್ವ ಕಾದಂಬರಿ ಬರೆಯುವಾಗ ಹಿಮಾಲಯವನ್ನೂ ಸೇರಿದಂತೆ ಇಡೀ ಭಾರತ ಸಂಚರಿಸಿದ್ದಾರೆ. ಸಂಗೀತದ ಕುರಿತ ಮಂದ್ರ ಕಾದಂಬರಿ ಬರೆಯುವ ಮೊದಲು ಸಂಗೀತದ ಸಾಕಷ್ಟು ಅಭ್ಯಾಸವನ್ನೂ ಮಾಡಿದರು. ಆವರಣ ಬರೆಯುವ ಮೊದಲು ಮುಸ್ಲಿಮರೊಬ್ಬರ ಮನೆಯಲ್ಲಿ ಕೆಲವು ತಿಂಗಳ ಕಾಲ ತಂಗಿ ಅಲ್ಲಿನ ನಡವಳಿಕೆಗಳನ್ನು ಅಭ್ಯಾಸ ಮಾಡಿದರು. ಇನ್ನು ಪ್ರವಾಸಪ್ರಿಯರಾದ ಅವರು ಅಂಟಾರ್ಕ್‌ಟಿಕಾ ಪ್ರದೇಶಕ್ಕೂ ಪ್ರವಾಸ ಮಾಡಿ ಬಂದಿದ್ದಾರೆ.
ಎಸ್.ಎಲ್ ಭೈರಪ್ಪ ನಿಧನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್,ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *