

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ 1,01,603 ಕೋಟಿ ರೂ. ತೆರಿಗೆ ಪಾಲನ್ನು ಗುರುವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ 3,705 ಕೋಟಿ ರೂ ಹಂಚಿಕೆ ಮಾಡಲಾಗಿದೆ.
ರಾಜ್ಯಗಳ ಅಭಿವೃದ್ಧಿ/ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಮತ್ತು ಬಂಡವಾಳ ವೆಚ್ಚ ವೇಗಗೊಳಿಸಲು ಹಾಗೂ ಮುಂಬರುವ ಹಬ್ಬಗಳ ಋತುವಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ಟೋಬರ್ 1 ರಂದು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ 1,01,603 ಕೋಟಿ ರೂ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕರ್ನಾಟಕ ಸೇರಿದಂತೆ ಎಲ್ಲಾ 28 ರಾಜ್ಯ ಸರ್ಕಾರಗಳಿಗೂ ಕೇಂದ್ರ ಹಣಕಾಸು ಸಚಿವಾಲಯ ಒಟ್ಟಾರೆ 1,01,603 ಕೋಟಿ ರೂ. ಹೆಚ್ಚುವರಿ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.
ದಸರಾ-ದೀಪಾವಳಿ ಹಬ್ಬಗಳ ಋತುವಿನಲ್ಲಿ ಕೇಂದ್ರ ಸರ್ಕಾರ ಮಹತ್ತರ ನಿರ್ಣಯ ಕೈಗೊಂಡು ಎಲ್ಲಾ ರಾಜ್ಯಗಳಿಗೂ ನೆರವಾಗುವಂತೆ ತೆರಿಗೆ ಹಂಚಿಕೆಯ ಒಂದು ಮುಂಗಡ ಕಂತು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 3705 ಕೋಟಿ ರೂ. ಹೆಚ್ಚುವರಿ ತೆರಿಗೆ ಪಾಲನ್ನು ಒದಗಿಸಲಾಗಿದೆ. ರಾಜ್ಯಗಳ ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಹಾಗೂ ಅಭಿವೃದ್ಧಿ, ಕಲ್ಯಾಣ ಕಾರ್ಯಗಳ ವೆಚ್ಚಕ್ಕೆ ಆರ್ಥಿಕ ನೆರವು ಒದಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ದೇಶದ ಎಲ್ಲಾ 28 ರಾಜ್ಯ ಸರ್ಕಾರಗಳಿಗೂ ಒಟ್ಟಾರೆ 1,01,603 ಕೋಟಿ ರೂ. ತೆರಿಗೆ ಹಂಚಿಕೆಯನ್ನು ಮುಂಗಡ ಕಂತಾಗಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 10ರಂದು ಬಿಡುಗಡೆ ಆಗಬೇಕಾದ ಸಾಮಾನ್ಯ ಮಾಸಿಕ ಹಂಚಿಕೆ ಜೊತೆಗೇ ಈ ಹೆಚ್ಚುವರಿ ತೆರಿಗೆ ಪಾಲಿನ ಹಣವೂ ಬಿಡುಗಡೆಯಾಗಲಿದೆ. ರಾಜ್ಯ ಸರ್ಕಾರಗಳು ಅಭಿವೃದ್ಧಿ ಕಾರ್ಯಗಳಿಗೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.


