

ಕಾರ್ಕಳ, ಅ.04: ಬಿಜೆಪಿ ಹಿರಿಯ ಮುಖಂಡ ,ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್ ಶುಕ್ರವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಾತ್ರಿ ಮನೆಯಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ತಮ್ಮ ವಕೀಲ ವೃತ್ತಿಯಲ್ಲಿ 50 ವರ್ಷಗಳ ಸೇವೆ ಸಲ್ಲಿಸಿದ ಎಂ.ಕೆ ವಿಜಯಕುಮಾರ್ ಅವರು ರಾಜಕೀಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.ಬಿಜೆಪಿಯ ಧುರೀಣರಾಗಿ ಪಕ್ಷ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಅವರ ಕೊಡುಗೆ ಅಪಾರವಾಗಿತ್ತು. ತಮ್ಮ ಸಮಕಾಲೀನರು ಹಾಗೂ ಶಾಲಾ ದಿನಗಳ ಸಹಪಾಠಿ ಹಾಗೂ ಸ್ನೇಹಿತ ರಾಗಿದ್ದ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿಯವರ ವಿರುದ್ಧ ಕಾರ್ಕಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಇದಾದ ಬಳಿಕ ರಾಮಕೃಷ್ಣ ಹೆಗಡೆಯವರ ಜನತಾದಳದಿಂದ ಸ್ಪರ್ಧಿಸಿದ್ದರು.ತದನಂತರ ಮತ್ತೆ ಬಿಜೆಪಿ ಪಕ್ಷಕ್ಕೆ ಮರಳಿದ ಅವರು ಪಕ್ಷ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಳಿವಯಸ್ಸಿನಲ್ಲೂ ನ್ಯಾಯವಾದಿಯಾಗಿ ಕಕ್ಷಿದಾರರ ಪರವಾಗಿ ತಾವೇ ಕೋರ್ಟ್ ನಲ್ಲಿ ವಾದಿಸುತ್ತಿದ್ದರು.
ಎಂ.ಕೆ ವಿಜಯಕುಯ ಅವರ ನಿಧನಕ್ಕೆ ಅವರ ಶಿಷ್ಯ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಝೀರ್, ಮಾಜಿ ಸಿಎಂ ಡಾ.ಎಂ ವೀರಪ್ಪ ಮೊಯ್ಲಿ ,ಕಾರ್ಕಳ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.


