
ಮೆಲ್ಬೋರ್ನ್, ಅ,30: ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ವೇಳೆ ಬೌಲಿಂಗ್ ಯಂತ್ರವು ಎಸೆದ ಚೆಂಡು ಆಟಗಾರನ ಕುತ್ತಿಗೆಯ ಹಿಂಭಾಗಕ್ಕೆ ಬಡಿದ ಪರಿಣಾಮ ಆತ ಕೋಮಾಗೆ ಜಾರಿ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿದೆ.
ಆಸ್ಟ್ರೇಲಿಯಾದ ಯುವ ಆಟಗಾರ ಕೇವಲ 17ರ ಹರೆಯದ ಬೆನ್ ಆಸ್ಟಿನ್ ಮೈದಾನದಲ್ಲಿ ಅಭ್ಯಾಸದ ವೇಳೆ ಚೆಂಡು ಬಡಿದು ಸಾವನ್ನಪ್ಪಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಚೆಂಡನ್ನು ಎದುರಿಸುವಲ್ಲಿ ಬೆನ್ ಆಸ್ಟಿನ್ ವಿಫಲರಾದಾಗ ಚೆಂಡು ತಲೆಯ ಹಿಂಭಾಗದ ಕುತ್ತಿಗೆಯ ಕೆಳಭಾಗಕ್ಕೆ ಬಡಿದಿತು. ತಲೆಗೆ ಹೆಲ್ಮೆಟ್ ಧರಿಸಿದ್ದರೂ ಅವರು ತೀವೃವಾಗಿ ಗಾಯಗೊಂಡು ಕೋಮಾಗೆ ಜಾರಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಿಸದೇ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಫರ್ನ್ಟ್ರೀ ಕ್ರಿಕೆಟ್ ಕ್ಲಬ್ ತಿಳಿಸಿದೆ.
17 ವರ್ಷದ ಬೆನ್ ಆಸ್ಟಿನ್ ಮೆಲ್ಬೋರ್ನ್ನ ಈಸ್ಟಸ್ನಲ್ಲಿರುವ ಫರ್ನ್ಟ್ರೀ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿಯುತ್ತಿದ್ದರು. ಅದರಂತೆ ಅಕ್ಟೋಬರ್ 28 ರಂದು ಮುಂದಿನ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ್ದರು. ಬೌಲಿಂಗ್ ಯಂತ್ರದ ಮೂಲಕ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ಬೆನ್ ಆಸ್ಟಿನ್ ಹೆಲ್ಮೆಟ್ ಕೂಡ ಧರಿಸಿದ್ದರೂ ಕೂಡ ಪ್ರಯೋಜನವಾಗಲಿಲ್ಲ.
ಕಳೆದ 2014 ರಲ್ಲಿ ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಸ್ ಕೂಡ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದ್ದರು. ಶೀಲ್ಡ್ ಫೀಲ್ಡ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಹ್ಯೂಸ್, ಶಾನ್ ಅಬಾಟ್ ಎಸೆದ ಚೆಂಡನ್ನು ಗುರುತಿಸುವಲ್ಲಿ ವಿಫಲರಾಗಿದ್ದರು. ಪರಿಣಾಮ ಚೆಂಡು ಅವರ ತಲೆಯ ಹಿಂಭಾಗಕ್ಕೆ ತಾಗಿತ್ತು. ಇದರಿಂದ ಅವರು ಕೋಮಾಕ್ಕೆ ಜಾರಿ ಅಸುನೀಗಿದ್ದರು. ಇದೀಗ ಈ ಘಟನೆಯನ್ನು ನೆಪಿಸುವಂತಹ ಮತ್ತೊಂದು ದುರ್ಘಟನೆ ನಡೆದಿದ್ದು, ಅತ್ಯಂತ ಬೇಸರದ ಸಂಗತಿಯಾಗಿದೆ.




