
ಬೆಂಗಳೂರು, ನವೆಂಬರ್ 10: ನೀರು ಸರಬರಾಜು, ವಿದ್ಯುತ್ ವ್ಯತ್ಯಯ, ಹದಗೆಟ್ಟ ರಸ್ತೆಗಳು ಅಥವಾ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಮಸ್ಯೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಲು ಕರ್ನಾಟಕ ಇ-ಗವರ್ನೆನ್ಸ್ ಕೇಂದ್ರವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದು,ಈ ಹೊಸ ವ್ಯವಸ್ಥೆ ಡಿಸೆಂಬರ್ನಿಂದ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಯಿದೆ.
2021 ರಿಂದ ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (iPGRS) ಕಾರ್ಯನಿರ್ವಹಿಸುತ್ತಿದ್ದು, ಇದರ ಮೂಲಕ ವೆಬ್ಸೈಟ್ ಬಳಸಿ ದೂರುಗಳನ್ನು ಸಲ್ಲಿಸಬಹುದಾಗಿದೆ. ಆದರೆ ಈ ನೂತನ ವ್ಯವಸ್ಥೆಯಲ್ಲಿ ಜನರು ಕೇವಲ ತಮ್ಮ ಹೆಸರು, ವಿಳಾಸ, ಸಮಸ್ಯೆಯ ಸ್ವರೂಪ ಮುಂತಾದ ಮೂಲಭೂತ ಮಾಹಿತಿಯನ್ನು ನೀಡಿದರೆ ಸಾಕು, ವ್ಯವಸ್ಥೆಯೇ ಸ್ವಯಂಚಾಲಿತವಾಗಿ ದೂರು ಪತ್ರವನ್ನು ರಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುತ್ತದೆ. ವಿಶೇಷವೆಂದರೆ, ಜನರು ಮೌಖಿಕವಾಗಿ ತಮ್ಮ ಸಮಸ್ಯೆಯನ್ನು ಹೇಳಬಹುದು ಅಥವಾ ಧ್ವನಿ ಸಂದೇಶ ರೂಪದಲ್ಲಿಯೂ ದಾಖಲಿಸಬಹುದು. ಕೆಲವೇ ಕೆಲವು ಶಬ್ಧಗಳನ್ನು(Keywords)ನೀಡಿದರೆ ಅದರಿಂದ ಅರ್ಥಪೂರ್ಣವಾಗಿ ಪತ್ರ ಬರೆದುಕೊಡುತ್ತದೆ. ಇದು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಿರಲಿದೆ ಎಂದು ಕರ್ನಾಟಕ ಇ-ಗವರ್ನೆನ್ಸ್ ಕೇಂದ್ರವು ಹೇಳಿದೆ.
AI ವ್ಯವಸ್ಥೆಯು ChatGPT ಮಾದರಿಯ ತಂತ್ರಜ್ಞಾನವನ್ನು ಬಳಸಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪತ್ರ ರಚಿಸುವ ಸಾಮರ್ಥ್ಯ ಹೊಂದಿದೆ. ಪ್ರತಿ ದೂರಿಗೆ ವಿಶಿಷ್ಟ ಕುಂದುಕೊರತೆ ID ಕೂಡ ನೀಡಲಾಗುತ್ತದೆ. ಸಮಸ್ಯೆ ಪರಿಹಾರ ಪ್ರಕ್ರಿಯೆಗೂ ನಿಗದಿತ ಕಾಲಮಿತಿ ನಿಗದಿಯಾಗಿದೆ. ಏಳು ದಿನಗಳಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ, ಅದು ಸ್ವಯಂಚಾಲಿತವಾಗಿ ಹಿರಿಯ ಅಧಿಕಾರಿಗೆ ಸಾಗುತ್ತದೆ. ಅಂತಿಮವಾಗಿ 21 ದಿನಗಳ ಒಳಗೆ ದೂರು ಪರಿಹರಿಸುವ ವ್ಯವಸ್ಥೆ ಇದೆ.
ಕಿರಿಯ ಅಧಿಕಾರಿಯೊಬ್ಬರು ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ, ಎಂಟನೇ ದಿನದಂದು ಸ್ವಯಂಚಾಲಿತವಾಗಿ ಅವರ ಹಿರಿಯ ಅಧಿಕಾರಿಗೆ ತಲುಪುತ್ತದೆ. ಇಲ್ಲಿಯೂ ಸಹ, ಏಳು ದಿನಗಳ ಕಾಲಾವಕಾಶ ನೀಡಲಾಗುತ್ತದೆ . ಅದರ ನಂತರ ಅಂತಿಮವಾಗಿ ಇಲಾಖೆಯ ಮುಖ್ಯಸ್ಥರಿಗೆ 15 ನೇ ದಿನದಂದು ಸಂದೇಶವನ್ನು ಕಳುಹಿಸಲಾಗುತ್ತದೆ. ಅದನ್ನು 21 ದಿನಗಳಲ್ಲಿ ಪರಿಹರಿಸಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಈ ವ್ಯವಸ್ಥೆಯು ಪ್ರಾಯೋಗಿಕ ಹಂತದಲ್ಲಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.

