Share this news

ನವದೆಹಲಿ: ದೇಶಾದ್ಯಂತ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐಸಿಸ್ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಭಯಾನಕ ಸಂಗತಿಗಳು ಹೊರಬಿದ್ದಿವೆ. ಬಂಧಿತರಲ್ಲಿ ಒಬ್ಬನಾದ ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್ ಜಗತ್ತಿನ ಅತ್ಯಂತ ಮಾರಣಾಂತಿಕ ವಿಷಗಳಲ್ಲಿ ಒಂದಾದ ‘ರಿಸಿನ್‌’ ಅನ್ನು ತಯಾರಿಕೆಯಲ್ಲಿ ತೊಡಗಿದ್ದು, ಈ ಮಾರಣಾಂತಿಕ ವಿಷವನ್ನು ಸಾಮೂಹಿಕ ಹತ್ಯೆಗೆ ಬಳಸಲು ಸಂಚು ರೂಪಿಸಿದ್ದ ಎನ್ನುವ ಆತಂಕಕಾರಿ ಮಾಹಿತಿ ಬಯಲಿಗೆ ಬಂದಿದೆ.

ಚೀನಾದಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್, ತನ್ನ ವೈದ್ಯಕೀಯ ಜ್ಞಾನವನ್ನು ಬಳಸಿ ಹರಳೆಣ್ಣೆ ಬೀಜಗಳಿಂದ ‘ರಿಸಿನ್’ ಎಂಬ ಮಾರಣಾಂತಿಕ ವಿಷವನ್ನು ದೀರ್ಘಕಾಲದಿಂದ ತಯಾರಿಸುತ್ತಿದ್ದ. ಈ ವಿಷದ ವಿಶೇಷತೆ ಏನೆಂದರೆ, ಇದಕ್ಕೆ ಯಾವುದೇ ರುಚಿ ಅಥವಾ ವಾಸನೆ ಇರುವುದಿಲ್ಲ. ಆದ್ದರಿಂದ, ಇದನ್ನು ಆಹಾರ ಅಥವಾ ನೀರಿನಲ್ಲಿ ಬೆರೆಸಿದರೂ ಪತ್ತೆ ಹಚ್ಚುವುದು ಬಹುತೇಕ ಅಸಾಧ್ಯ.
ಇದೇ ಗುಣವನ್ನು ಬಳಸಿಕೊಂಡು ದಿಲ್ಲಿ, ಅಹಮದಾಬಾದ್ ಮತ್ತು ಲಖನೌ ನಗರಗಳಲ್ಲಿನ ನೀರು ಸರಬರಾಜು ವ್ಯವಸ್ಥೆ ಮತ್ತು ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದದಲ್ಲಿ ವಿಷ ಬೆರೆಸಿ ಸಾಮೂಹಿಕ ಹತ್ಯೆ ನಡೆಸಲು ಈತ ಯೋಜಿಸಿದ್ದ. ಇದಕ್ಕಾಗಿ ಒಂದಿಷ್ಟು ಸ್ಥಳಗಳನ್ನು ಗುರುತಿಸಿ, ಅವುಗಳ ಮೇಲೆ ನಿರಂತರ ನಿಗಾವನ್ನೂ ಇರಿಸಿದ್ದ ಎನ್ನಲಾಗಿದೆ.
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌)ನಿಂದ ಬಂಧಿತರಾದ ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್, ಮೊಹಮ್ಮದ್ ಸುಹೇಲ್ ಮತ್ತು ಆಜಾದ್, ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಐಸಿಸ್ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇದಲ್ಲದೆ, ಇವರಿಗೆ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಡ್ರೋನ್‌ಗಳ ಮೂಲಕ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಎಂಬ ಆಘಾತಕಾರಿ ವಿಷಯವೂ ತನಿಖೆ ವೇಳೆ ಬಹಿರಂಗವಾಗಿದೆ.
ಭಯೋತ್ಪಾದನಾ ನಿಗ್ರಹ ದಳಗಳ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಈ ಮೂವರು ಉಗ್ರರು ಹೆಣೆದಿದ್ದ ಭಾರೀ ಸಂಚು ವಿಫಲಗೊಂಡಿದೆ.ಭದ್ರತಾ ಏಜೆನ್ಸಿಗಳ ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ ಇದೀಗ ಸಂಭವನೀಯ ಭಾರಿ ದುರಂತವೊಂದು ತಪ್ಪಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *