
ನವದೆಹಲಿ (ನ.11): ಉಗ್ರರ ವಿರುದ್ಧ ಭದ್ರತಾಪಡೆಗಳು ದೇಶವ್ಯಾಪಿ ಕಾರ್‍ಯಾಚರಣೆ ನಡೆಸಿ ಕಳೆದ 2 ದಿನದಲ್ಲಿ 11 ಉಗ್ರರನ್ನು ಬಂಧಿಸಿದ ಬೆನ್ನಲ್ಲೇ, ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಸಿಗ್ನಲ್ ಬಳಿ ಸೋಮವಾರ ಸಂಜೆ 6.52ರ ವೇಳೆಗೆ ಭೀಕರ ಸ್ಫೋಟವೊಂದು ಸಂಭವಿಸಿದೆ. ಹ್ಯುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು, ಅದರ ತೀವ್ರತೆಗೆ ಅಕ್ಕಪಕ್ಕದ ವಾಹನಗಳಿಗೂ ಬೆಂಕಿ ಹತ್ತಿಕೊಂಡು ಅವು ಸುಟ್ಟು ಕರಕಲಾಗಿವೆ. ಈ ದುರ್ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಸ್ಫೋಟ ಆಕಸ್ಮಿಕವೇ ಅಥವಾ ಉಗ್ರರ ಕೃತ್ಯವೇ ಎಂಬುದು ಇನ್ನೂ ಖಚಿತಗೊಂಡಿಲ್ಲ. ಘಟನಾ ಸ್ಥಳಕ್ಕೆ ಎನ್ಎಸ್‌ಜಿ, ಎನ್‌ಐಎ, ವಿಧಿವಿಜ್ಞಾನ ತಜ್ಞರು ಧಾವಿಸಿದ್ದು ಮಾಹಿತಿ ಕಲೆ ಹಾಕಿದ್ದಾರೆ. ಕಾರು ಮಾಲೀಕ ಸಲ್ಮಾನ್ ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾರಿಂದ ಘಟನೆಯ ಕುರಿತು ಮಾಹಿತಿ ಕಲೆ ಹಾಕಿದ್ದು ಇಡೀ ಘಟನೆ ಬಗ್ಗೆ ತೀವ್ರ ನಿಗಾ ಇರಿಸಿದ್ದಾಗಿ ಹೇಳಿದ್ದು, ಅಪಾರ ಸಾವು ನೋವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ದೆಹಲಿ ಸ್ಫೋಟ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಯುಪಿ, ಕರ್ನಾಟಕರ್ನಾಟಕ ಸೇರಿ ದೇಶಾದ್ಯಂತ ಭಾರೀ ಹೈಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಪ್ರಮುಖ ದೇಗುಲ ನಗರಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

