
ಬೆಂಗಳೂರು, ನವೆಂಬರ್ 14: ರಾಜ್ಯದಲ್ಲಿ ಬಾಕಿಯಿರುವ ಎಲ್ಲಾ ವಾಹನ ನೋಂದಣಿ ಅರ್ಜಿಗಳನ್ನು ನವಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆರ್ಟಿಓ (RTO) ಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ (ನ.13)ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸಾಕಷ್ಟು ನೋಂದಣಿ ಅರ್ಜಿಗಳು ಬಾಕಿ ಇವೆ. ಅದರ ಜೊತೆಗೆ ಶೇ. 50 ರಷ್ಟು ಹೊಸ ನೋಂದಣಿ ಅರ್ಜಿಗಳು ಸಲ್ಲಿಕೆಯಾಗಿವೆ. ನವೆಂಬರ್ 30ರೊಳಗೆ ಈ ಎಲ್ಲಾ ಅಜಿರ್ಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಬೇಕು ಎಂದರು.
ಅರ್ಜಿಗಳ ಡಿಜಿಟಲೀಕರಣದಲ್ಲಿ ಕೆಲವು ಸಾಫ್ಟ್ ವೇರ್ ದೋಷಗಳು ಎದುರಾಗಿದ್ದು, ಇಲಾಖೆ ಆ ದೋಷಗಳನ್ನು ಸರಿಪಡಿಸುವ ಪ್ರಯತ್ನದಲ್ಲಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಫಿಟ್ನೆಸ್ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲನ್ನು ಅಳವಡಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಲೋಕಲ್ ಬಸ್ ಆಗಿರಲಿ, ಐಷಾರಾಮಿ ಬಸ್ ಆಗಿರಲಿ ತುರ್ತು ನಿರ್ಗಮನದ ಬಾಗಿಲು ಕಡ್ಡಾಯವಾಗಿದೆ. ಹಲವಾರು ಬಸ್ಗಳಲ್ಲಿ ಕೇವಲ ತುರ್ತು ನಿರ್ಗಮದ ಕಿಟಕಿಗಳು ಮಾತ್ರವಿದ್ದು, ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಇದರಿಂದ ತೊಂದರೆಯಾಗಬಹುದು. ಹೀಗಾಗಿ ತುರ್ತು ಬಾಗಿಲು ಅತ್ಯಗತ್ಯ. ವಾಹನ ಯಾವಾಗಲಾದರೂ ನೋಂದಣಿಯಾಗಿರಲಿ, ನಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ನಮ್ಮ ನೀತಿ ನಿಯಮಗಳಿಗೆ ಬದ್ಧರಾಗಿರಲೇಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.
ಅಲ್ಲದೇ ಸಾರ್ವಜನಿಕ ಸಾರಿಗೆಗಳಲ್ಲಿ ಅತಿಯಾದ ವಾಣಿಜ್ಯ ವಸ್ತುಗಳ ಸಾಗಾಟ ಕಂಡುಬಂದಲ್ಲಿ ಇಲಾಖೆಯು ಕಠಿಣ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದ್ದಾರೆ.

