
ಕಲಬುರಗಿ, ನವೆಂಬರ್ 17: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿತ್ತಾಪುರ ಪಥಸಂಚಲನ ಒಂದೆರಡು ಅಹಿತಕರ ವಿದ್ಯಮಾನದ ಮಧ್ಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಹೈಕೋರ್ಟ್ ಷರತ್ತಿನ ಅನ್ವಯ, ಸುಮಾರು 350 ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಕೋಲು ಹಿಡಿದು, ಶಿಸ್ತಿನಿಂದ ಸಂಘದ ಬ್ಯಾಂಡಿಗೆ ಸರಿಯಾಗಿ ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಸುಮಾರು, 1.2 ಕಿಲೋಮೀಟರ್ ಪರೇಡ್ ನಲ್ಲಿ ಹೆಜ್ಜೆ ಹಾಕಲಾಯಿತು. ಆ ಮೂಲಕ, ತಿಂಗಳಿನಿಂದ ನಡೆಯುತ್ತಿದ್ದ ಜಟಾಪಟಿಗೆ ತೆರೆಬಿದ್ದಂತಾಗಿದೆ.
ಆರ್ಎಸ್ಎಸ್ಗೆ (RSS) ಕಡಿವಾಣ ಹಾಕಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದರಿಂದ ಸಿಟ್ಟಿಗೆದಿದ್ದ ಆರ್ಎಸ್ಎಸ್, ಪ್ರಿಯಾಂಕ್ ತವರು ನೆಲ ಚಿತ್ತಾಪುರದಲ್ಲೇ ಪಥಸಂಚಲನ ಮಾಡಲು ನಿರ್ಧರಿಸಿತ್ತು. ಆದರೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಿರಲಿಲ್ಲ. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಆರ್ಎಸ್ಎಸ್, ಅಲ್ಲಿಂದಲೇ ಅನುಮತಿ ಪಡೆದು ಪರೇಡ್ ಮಾಡಿ ಮುಗಿಸಿದೆ.
ಚಿತ್ತಾಪುರ ಪಟ್ಟಣದಲ್ಲಿ ಮಧ್ಯಾಹ್ನ 3:45ಕ್ಕೆ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕೆನರಾ ಬ್ಯಾಂಕ್ ವೃತ್ತ ಮಾರ್ಗವಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು. ಸುಮಾರು ಒಂದೂವರೆ ಕಿ.ಮೀ ನಷ್ಟು ಪಥಸಂಚಲನ ನಡೆದಿದ್ದು, ನಿರೀಕ್ಷೆಗಿಂತ ಮೀರಿ ಜನರ ಬೆಂಬಲದೊಂದಿಗೆ ಅದ್ಧೂರಿ ಪಥಸಂಚಲನ ಜರುಗಿದೆ.

