
ನವದೆಹಲಿ: ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ಬಿ.ಆರ್. ಗವಾಯಿ ಅವರು ನವೆಂಬರ್ 23ರಂದು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಸ್ಟೀನ್ ಸೂರ್ಯಕಾಂತ್ ಅವರನ್ನು ಮುಂದಿನ ಸಿಜೆಐ ಆಗಿ ನೇಮಕ ಮಾಡಿದ್ದಾರೆ. ನ್ಯಾ. ಸೂರ್ಯಕಾಂತ್ ಅವರು ಪ್ರಸ್ತುತ ಸುಪ್ರೀಂಕೋರ್ಟ್ನ ಎರಡನೇ ಹಿರಿಯ ನ್ಯಾಯಾಧೀಶರಾಗಿದ್ದಾರೆ.
ಫೆಬ್ರವರಿ 10, 1962 ರಂದು ಹರಿಯಾಣದ ಹಿಸ್ಸಾರ್ನಲ್ಲಿ ಜನಿಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮೇ 24, 2019 ರಂದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾದರು. 370 ನೇ ವಿಧಿ ರದ್ದತಿ, ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಭ್ರಷ್ಟಾಚಾರ, ಪರಿಸರ ಮತ್ತು ಲಿಂಗ ಸಮಾನತೆಯ ಕುರಿತು ಹಲವಾರು ಐತಿಹಾಸಿಕ ತೀರ್ಪುಗಳನ್ನು ನೀಡಿದ ನ್ಯಾಯಪೀಠಗಳ ಭಾಗವಾಗಿದ್ದಾರೆ.
ಬಿಹಾರದಲ್ಲಿ ಪಟ್ಟಿಯಿಂದ ಹೊರಗಿಡಲಾದ 65 ಲಕ್ಷ ಮತದಾರರ ವಿವರಗಳನ್ನು ಬಹಿರಂಗಪಡಿಸುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದರು, ಇದು ಚುನಾವಣಾ ಪಾರದರ್ಶಕತೆಗೆ ಅವರ ಬದ್ಧತೆಯನ್ನು ತೋರಿಸುತ್ತದೆ. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ಬಾರ್ ಅಸೋಸಿಯೇಷನ್ಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ನಿರ್ದೇಶಿಸುವ ಮೂಲಕ ಅವರು ಇತಿಹಾಸ ನಿರ್ಮಿಸಿದರು.
