
ಕಾರ್ಕಳ, ನ,24:ಕಾರ್ಕಳ ತಾಲೂಕಿನ ಶಿರ್ಲಾಲಿನ ಅತಿಶಯ ಶ್ರೀಕ್ಷೇತ್ರವಾದ ಭಗವಾನ್ ಶ್ರೀ ಅನಂತನಾಥ ಸ್ವಾಮಿಯ ನೂತನ ಬಸದಿ ಶ್ರೀಸಿದ್ಧಗಿರಿ ಕ್ಷೇತ್ರದ ಪುನರ್ನಿರ್ಮಾಣ ಶಿಲಾನ್ಯಾಸವು ನ, 26ರಂದು ನಡೆಯಲಿದೆ ಎಂದು ಬಸದಿ ಆಡಳಿತ ಸಮಿತಿಯ ಅಧ್ಯಕ್ಷ ಡಾ. ಮಹಾವೀರ ಜೈನ್ ತಿಳಿಸಿದರು.
ಅವರು ಸೋಮವಾರ ಕಾರ್ಕಳ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿ,ಬುಧವಾರ ಬೆಳಿಗ್ಗೆ 10.40 ರಿಂದ 10.50ರ ಮಕರ ಲಗ್ನ ಸುಮುಹೂರ್ತದಲ್ಲಿ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ಬಸದಿಯ ಪುನರ್ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ವಿಧಿವತ್ತಾಗಿ ನೆರವೇರಲಿದೆ. ಈ ಸಂದರ್ಭದಲ್ಲಿ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಕಾರ್ಕಳ ಜೈನ ಮಠದಿಂದ ಪಾವನ ಸಾನ್ನಿಧ್ಯ ವಹಿಸಲಿದ್ದಾರೆ. ಪರಮಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಆರತಿಪುರ ಜೈನ ಮಠದಿಂದ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಿ ನಿಧಿಕಲಶ ಸ್ಥಾಪನೆ ನೆರವೇರಿಸಲಿದ್ದಾರೆ. ಸರ್ಕಾರದಿಂದ ಸುಮಾರು 50 ಲಕ್ಷ ರೂ. ಅನುದಾನ ಲಭಿಸಿರುವ ಈ ಜಿನಮಂದಿರವನ್ನು ಜೊಧಪುರದ ಕಲ್ಲಿನ ಕಂಬಗಳಿAದ ನಿರ್ಮಿಸಲು ಯೋಜನೆ ಮಾಡಲಾಗಿದ್ದು, ಒಟ್ಟು ಸುಮಾರು 2.5 ಕೋಟಿ ರೂ. ಖರ್ಚಾಗಲಿದೆ ಎಂದ ಅವರು, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಕೆ. ಅಭಯಚಂದ್ರ ಜೈನ್, ನಾಭಿರಾಜ್ ಜೈನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು
ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ಎಸ್. ಅನಂತ ರಾಜ್ ಪೂವಣಿ, ಉಪಾಧ್ಯಕ್ಷ ಸುದರ್ಶನ್ ಅತಿಕಾರಿ ಮತ್ತು ಸನತ್ ಕುಮಾರ್ ಜೈನ್ ಉಪಸ್ಥಿತರಿದ್ದರು.
.
