
ಬೆಂಗಳೂರು: 1975ರಲ್ಲಿ ಮತಗಳ್ಳತನ ಮಾಡಿ ಸಿಕ್ಕಿಬಿದ್ದ ಇಂದಿರಾಗಾಂಧಿ ತನ್ನ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದರು.ಈ ಸಂದರ್ಭದಲ್ಲಿ ಯಾವ ಕೋರ್ಟುಗಳೂ ಪ್ರಶ್ನೆ ಮಾಡದಂತೆ ನೋಡಿಕೊಂಡಿದ್ದರು. ನ್ಯಾಯಾಲಯಗಳೇ ತಟಸ್ಥವಾಗಿ ಇರುವಂತೆ ಮಾಡಲಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಅವರು ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನ,26 ರಂದು ಸಂವಿಧಾನ ಸಮರ್ಪಣ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿ, ಇಂತಹ ಅನಾಹುತಗಳನ್ನು ಮಾಡಿದ ಕಾಂಗ್ರೆಸ್ ಪಕ್ಷವು ಮತಗಳ್ಳತನದ ಮಾತನಾಡುತ್ತಿದೆ.ಮತಗಳ್ಳತನದ ಕುರಿತು ರಾಹುಲ್ ಬೀದಿಯಲ್ಲಿ ಮಾತನಾಡುತ್ತಾರೆ ಆದರೆ ಕಾನೂನು ಹೋರಾಟಕ್ಕಾಗಿ ಕೋರ್ಟಿಗೆ ಹೋಗುವುದಿಲ್ಲ. ಯಾಕೆಂದರೆ ಆಧಾರರಹಿತ ಸುಳ್ಳು ಆರೋಪ ಮಾಡಿದರೆ ರಾಹುಲ್ ಗಾಂಧಿ ಬಂಧನಕ್ಕೆ ಒಳಗಾಗುತ್ತಾರೆ ಎಂಬ ಕಾರಣಕ್ಕೆ ಅವರು ಕಾನೂನು ಹೋರಾಟ ಮಾಡುತ್ತಿಲ್ಲ. ಇದಕ್ಕಾಗಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ನಾವು ಸಂವಿಧಾನದ ವಿರೋಧಿಗಳು ಎನ್ನುತ್ತಿದೆ ಎಂದು ಟೀಕಿಸಿದರು. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರು, ಅಂಬೇಡ್ಕರ್ ದೆಹಲಿ ನಿವಾಸದಲ್ಲಿ ತೀರಿಕೊಂಡಾಗ ಅವರ ಶವ ಸಂಸ್ಕಾರಕ್ಕೂ ಜಾಗ ಕೊಡದೇ, ಅನಾಥ ಶವದಂತೆ ಸಮುದ್ರ ತೀರದಲ್ಲಿ ಅವರ ಅಂತ್ಯಕ್ರಿಯೆ ಮಾಡಿ, ಅಂಬೇಡ್ಕರ್ ಅವರನ್ನು ಸತ್ತ ನಂತರವೂ ಕಾಂಗ್ರೆಸ್ ಅಪಮಾನ ಮಾಡಿ, ಈಗ ಬಿಜೆಪಿ ಅಂಬೇಡ್ಕರ್ ವಿರೋಧಿ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು. ಮಾತ್ರವಲ್ಲದೇ ಸಂವಿಧಾನಕ್ಕೆ ಅಪಚಾರ ಮಾಡಿದವರು ಸಂವಿಧಾನದ ಪುಸ್ತಕ ಹಿಡಿದುಕೊಂಡು ಈ ಸಂವಿಧಾನವನ್ನು ನಾವು ಕಾಪಾಡಬೇಕು, ನಮ್ಮನ್ನು ಬಿಟ್ಟರೆ ಯಾರಿಂದಲೂ ಆಗಲ್ಲ ಎಂದು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ದಲಿತರ ಪರ ಎಂದು ಹೇಳುವ ಕಾಂಗ್ರೆಸ್ ಎಂದಿಗೂ ದಲಿತರ ಪರ ಅಲ್ಲ, ಕೇವಲ 2/3 ದಲಿತ ಕುಟುಂಬಗಳನ್ನು ಗುತ್ತಿಗೆ ತೆಗೆದುಕೊಂಡಿದೆ. ಅವರಿಗೆ ದಲಿತ ಪ್ರೇಮವೂ ಇಲ್ಲ. ಕಾಂಗ್ರೆಸ್ಸಿಗೆ ದಲಿತ ಪ್ರೀತಿಯೂ ಇಲ್ಲ. ದಲಿತರು ಎಲ್ಲಿ ಬೇಕಾದರೂ ಹಾಳಾಗಲಿ,ನಮ್ಮ ಕುಟುಂಬ ಸರಿ ಇದ್ದರೆ ಸಾಕು ಎಂಬ ಯೋಚನೆ ಆ ಮೂರು ಕುಟುಂಬಗಳದ್ದು ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಕಾಂಗ್ರೆಸ್ಸಿಗೆ ಯಾವುದೇ ನೈತಿಕತೆ ಉಳಿದಿಲ್ಲ,ಸಂವಿಧಾನ ದಿನಾಚರಣೆ ಅವರದಲ್ಲ. ಮೋದಿಯವರ ನಾಯಕತ್ವದಲ್ಲಿ ಸಂವಿಧಾನ ದಿನಾಚರಣೆ ಈ ದೇಶಕ್ಕೆ ಬಂದಿದೆ ಎಂದು ನಾವು ಎದೆತಟ್ಟಿ ಹೇಳಬೇಕು ಎಂದು ಮನವಿ ಮಾಡಿದರು. ಅದು ಕಾಂಗ್ರೆಸ್ಸಿನ ಕೊಡುಗೆ ಅಲ್ಲ ಎಂದು ತಿಳಿಸಿದರು. ನಾವು ಸಂವಿಧಾನದ ಪರ, ನಾವು ಬಾಬಾ ಸಾಹೇಬ ಡಾ. ಅಂಬೇಡ್ಕರರ ಪರ, ನಾವು ಮೀಸಲಾತಿ- ದಲಿತರ ಎಂದು ಎದೆತಟ್ಟಿ ಹೇಳಬಹುದು; ಕಾಂಗ್ರೆಸ್ ಹೇಳುತ್ತಿದ್ದು ಅದು ಆತ್ಮವಂಚನೆ ಎಂದು ತಿಳಿಸಿದರು. ರಾಜ್ಯದಲ್ಲಿ ದಲಿತರ, ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಏರಿಸಿದ್ದು ಬಿಜೆಪಿ. ಎಸ್‌ಟಿಗಳ ಮೀಸಲಾತಿ 3ರಿಂದ 7ಕ್ಕೆ ಹೆಚ್ಚಿಸಿದ್ದು ಬಿಜೆಪಿ. ಆದರೂ ನಮ್ಮನ್ನು ಮೀಸಲಾತಿ ವಿರೋಧಿಗಳು ಎನ್ನುತ್ತಾರೆ. ಸಂವಿಧಾನವಿರೋಧಿಗಳು ಎನ್ನುತ್ತಾರೆ. ಬಾಬಾಸಾಹೇಬರ ಪಂಚ ಕ್ಷೇತ್ರಗಳನ್ನು ರಾಷ್ಟ್ರೀಯ ಸ್ಮಾರಕ ಮಾಡಿದ್ದು ನರೇಂದ್ರ ಮೋದಿಜೀ ಅವರ ಬಿಜೆಪಿ ಸರಕಾರ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಮುಖಂಡ ಮುನಿಕೃಷ್ಣ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಮತ್ತು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
.
