
ಬೆಳಗಾವಿ, ಡಿ.08: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಡಿ.19ರವರೆಗೆ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ನಾನಾ ಸಂಘಟನೆಗಳಿಂದ ನಿತ್ಯ ಸಾಲು ಸಾಲು ಪ್ರತಿಭಟನೆಗಳು ನಡೆಯಲಿದ್ದು, ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲಿದೆ.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಬಿಜೆಪಿ ಸೇರಿದಂತೆ ಒಟ್ಟು 89 ಸಂಘಟನೆಗಳು ಅನುಮತಿ ಕೋರಿ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿವೆ. ಈ ಮೂಲಕ ಸದನದೊಳಗೆ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳಲಿದ್ದರೆ, ಹೊರಗೆ ಸಂಘಟನೆಗಳು ಸರ್ಕಾರಕ್ಕೆ ತಮ್ಮ ಬೇಡಿಕೆ ಪಟ್ಟಿಯನ್ನೇ ನೀಡಲು ಅಣಿಯಾಗಿವೆ.
ಮೊದಲ ದಿನವಾದ ಇವತ್ತು ಅಗಲಿದ ಗಣ್ಯರಿಗೆ ಸಂತಾಪ ಸೂಚಕ ಸಭೆ ನಡೆಯಲಿದೆ. ಮೊದಲ ದಿನವೇ ಉತ್ತರ ಕರ್ನಾಟಕ ಬಗ್ಗೆ ಚರ್ಚೆಗೆ ನಿಲುವಳಿ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಅನ್ನದಾತರ ಸಮಸ್ಯೆಗಳನ್ನು ಇಟ್ಟುಕೊಂಡೇ ಮೊದಲ ಹಂತದ ಹೋರಾಟಕ್ಕಿಳಿಯಲು ಬಿಜೆಪಿ ಸರ್ವ ಸನ್ನದ್ಧವಾಗಿದೆ.
ಇನ್ನು ಮೆಕ್ಕೆಜೋಳ ಬೆಲೆ ವಿಚಾರದಲ್ಲಿ ಕೇಂದ್ರದ ವೈಫಲ್ಯ ಬಗ್ಗೆ ಪ್ರತ್ಯಾರೋಪ, ಕಬ್ಬು ಬೆಳೆ ವಿಚಾರದಲ್ಲೂ ಕೇಂದ್ರದ ವಿರುದ್ಧ ಆರೋಪಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ಕಬ್ಬು, ಮೆಕ್ಕೆಜೋಳ ಬೆಳೆಗಾರರ ಬೆನ್ನಿಗೆ ಸರ್ಕಾರ ನಿಂತಿದೆ ಎಂದು ಸಮರ್ಥನೆ ಮಾಡಿಕೊಳ್ಳಲು ಯೋಜಿಸಿದೆ. 1 ಲಕ್ಷ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿ ಜನರ ಕಲ್ಯಾಣ ಕಾರ್ಯಗಳನ್ನು ಹಮ್ಮಿಕೊಂಡಿರುವ ಬಗ್ಗೆ ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಸಿದ್ಧತೆ ಮಾಡಿದೆ.
ಒಟ್ಟಿನಲ್ಲಿ ಇಂದಿನಿಂದ ಡಿಸೆಂಬರ್ 19ರವರೆಗೂ ಚಳಿಗಾಲದ ಅಧಿವೇಶನ ನಡೆಯಲಿದ್ದು, ವಿವಿಧ ಸಂಘಟನೆಗಳು ಹೋರಾಟಕ್ಕೆ ಮುಂದಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ 6 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
.
.
