Share this news

 

 

ಕಾರ್ಕಳ, ಡಿ.26: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ತನ್ನ 55 ವರ್ಷಗಳ ರಾಜಕಾರಣದಲ್ಲಿ ಎಂದಿಗೂ ಅಧಿಕಾರದ ಸ್ವಾರ್ಥ ಇರಲಿಲ್ಲ. ದೇಶಕ್ಕಾಗಿ ತನ್ನ ವೈಯಕ್ತಿಕ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ವ್ಯಕ್ತಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದರು.

ಅವರು ಕಾರ್ಕಳ ಬಿಜೆಪಿ ವತಿಯಿಂದ ಕಾರ್ಕಳದ ಕುಕ್ಕುಂದೂರು ಮೈದಾನದಲ್ಲಿ ನಡೆದ ಅಟಲ್ ಜನ್ಮ ಶತಾಬ್ದಿ ಪ್ರಯುಕ್ತ ಅಟಲ್ ಸ್ಮರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸಕ್ತ ರಾಜಕೀಯದಲ್ಲಿ ಟಿಕೆಟ್ ಸಿಗದಿದ್ದಾಗ ನಾಯಕರು ತಾನೇ ಕಟ್ಟಿದ ಪಕ್ಷವನ್ನು ಒಡೆಯುವ ಕೆಲಸಕ್ಕೂ ಮುಂದಾಗುತ್ತಾರೆ. ಅಧಿಕಾರದ ಹಪಹಪಿತನ ಇಂದಿನ ರಾಜಕೀಯ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದರು. ಸುಧೀರ್ಘ 55 ವರ್ಷ ರಾಜಕಾರಣದಲ್ಲಿ ಅಪಹಾಸ್ಯ ಹಾಗೂ ಕುಹಕಗಳನ್ನು ಎದುರಿಸಿ ವಿಷಮ ಪರಿಸ್ಥಿತಿಯಲ್ಲಿ ಪಕ್ಷವನ್ನು ಕಟ್ಟಿದ ವಾಜಪೇಯಿಯವರ ವ್ಯಕ್ತಿತ್ವವನ್ನು ಬಿಜೆಪಿ ಕಾರ್ಯಕರ್ತರು ಸ್ಮರಿಸಲೇಬೇಕು. ಸೋಲನ್ನೇ ಎದುರಿಸಿ ಎದೆಗುಂದದೆ ಪಕ್ಷವನ್ನು ಸಂಘಟಿಸಿ ಇಂದು ದೇಶದಾದ್ಯಂತ ಬಿಜೆಪಿ ಅಧಿಕಾರಕ್ಕೆ ಬರಲು ವಾಜಪೇಯಿಯವರ ತ್ಯಾಗವಿದೆ.
ಬದ್ದತೆ ಇರುವ ಕಡೆಗಳಲ್ಲಿ ಯಶಸ್ಸು ಇದ್ದೇ ಇರುತ್ತದೆ ಎನ್ನುವುದಕ್ಕೆ ಅಟಲ್ ಅವರು ಸಾಕ್ಷಿ. 10 ಬಾರಿ ಲೋಕಸಭಾ ಸದಸ್ಯರು 2 ಬಾರಿ ರಾಜ್ಯ ಸಭಾ ಸದಸ್ಯರಾಗಿ ದೇಶಸೇವೆ ಮಾಡಿದ ವಾಜಪೇಯಿಯವರು ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಅಟಲ್ ಹಾಗೂ ಅಡ್ವಾಣಿಯವರು ದೇಶ ಮೊದಲು ಪಕ್ಷ ನಂತರ ಎನ್ನುವ ಬದ್ಧತೆಯಿಂದ ರಾಜಕಾರಣ ಮಾಡಿಕೊಂಡು ಬಂದವರು ಎಂದು ಪಕ್ಷ ಸಂಘಟನೆಯ ಕುರಿತು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ದೇಶದ ಹಳ್ಳಿ ಹಳ್ಳಿಗಳ ಸಮಸ್ಯೆಗಳನ್ನು ಅರಿತಿದ್ದ ಅಟಲ್ ಗ್ರಾಮೀಣ ಭಾಗಗಳಿಗೆ ಗುಣಮಟ್ಟದ ರಸ್ತೆ ನಿರ್ಮಿಸಲು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ,ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಲು ಸರ್ವಶಿಕ್ಷಾ ಅಭಿಯಾನ ಯೋಜನೆ ಆರಂಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದರು. ಇಂತಹ ಮಹಾನ್ ಚೇತನಕ್ಕೆ ನಾವು ಸಲ್ಲಿಸುವ ಶ್ರದ್ಧಾಂಜಲಿ ಪುಷ್ಪಾಂಜಲಿಗಿಂತ ಅವರಿಗೆ ಸಲ್ಲಿಸುವ ಕಾರ್ಯಾಂಜಲಿ ಶ್ರೇಷ್ಠ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ನ್ಯಾಯವಾದಿ ಮಣಿರಾಜ ಶೆಟ್ಟಿ ಉಪಸ್ಥಿತರಿದ್ದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಸ್ವಾಗತಿಸಿ,ಸತ್ಯಶಂಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅಟಲ್ ಜೀವನ ಚರಿತ್ರೆಯ ಕುರಿತು 15 ನಿಮಿಷಗಳ ವಿಡಿಯೋ ಪ್ರದರ್ಶಿಸಲಾಯಿತು. ಇದಲ್ಲದೇ ಈ ಕಾರ್ಯಕ್ರಮದಲ್ಲಿ 6 ಶಕ್ತಿ ಕೇಂದ್ರಗಳ ಮಹಿಳಾ ಮೋರ್ಚಾ ತಂಡಗಳು ಸಮೂಹ ದೇಶಭಕ್ತಿ ಗೀತೆ ಹಾಡಿದರು.
ಆಗಮಿಸಿದ ಕಾರ್ಯಕರ್ತರಿಗೆ ಪಾನಿಪೂರಿ, ದಾವಣಗೆರೆ ಬೆಣ್ಣೆದೋಸೆ, ಮಸಾಲೆ ದೋಸೆಯ ವ್ಯವಸ್ಥೆ ಮಾಡಲಾಗಿತ್ತು.

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

    

   

             

     

             

           
   

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

 

Leave a Reply

Your email address will not be published. Required fields are marked *