
ಕಾರ್ಕಳ,ಜ.13: ಕಾಂಗ್ರೆಸ್ ನಾಯಕರ ರಾಜಕೀಯ ಸೇಡಿನ ಪರಿಣಾಮವಾಗಿ ಕಾರ್ಕಳದ ಪ್ರವಾಸೋದ್ಯಮ ಕೇಂದ್ರವಾಗಿದ್ದ ಪರಶುರಾಮ ಥೀಂ ಪಾರ್ಕ್ ಯೋಜನೆ ಬಲಿಯಾಗಿದೆ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆರೋಪಿಸಿದ್ದಾರೆ.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಹತಾಶೆ ಸ್ಥಿತಿಗೆ ತಲುಪಿದ್ದು, ತನಿಖೆಯ ನೆಪದಲ್ಲಿ ಹಾಗೂ ಮುಂದಿನ ಚುನಾವಣೆಯವರೆಗೆ ಈ ವಿಷಯವನ್ನು ಜೀವಂತ ಇಟ್ಟುಕೊಳ್ಳುವ ಉದ್ದೇಶದಿಂದ ಪರಶುರಾಮ ಥೀಂ ಪಾರ್ಕ್ ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ ಅನುದಾನವನ್ನು ತಡೆಹಿಡಿಯಲಾಗಿದೆ. ಇದರಿಂದ ಯಾವುದೇ ಕಾಮಗಾರಿಗಳು ಮುಂದುವರಿಯತ್ತಿಲ್ಲ.ಭಾರತೀಯ ಜನತಾ ಪಾರ್ಟಿ ಆರಂಭದಿಂದಲೂ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳುತ್ತಲೇ ಬಂದಿದೆ. ತನಿಖೆಯ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಬಾರದೆಂದು ಮನವಿ ಮಾಡಿದ್ದರೂ, ಕಾಂಗ್ರೆಸ್ ನಾಯಕರು ಮೊದಲು ಮೂರ್ತಿ ಫೈಬರ್‌ನದ್ದು ಎಂದು ಹುಯಿಲೆಬ್ಬಿಸಿ, ಬಳಿಕ ಅದು ಫೈಬರ್ ಮೂರ್ತಿಯಲ್ಲ ಎಂದು ಗೊತ್ತಾದ ನಂತರ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ಕಳ್ಳತನ ಪ್ರಕರಣದಲ್ಲಿ ಶಾಸಕರನ್ನು ತೇಜೋವಧೆ ಮಾಡಿ, ನೈಜ ಆರೋಪಿಗಳು ಬಂಧನವಾದ ಬಳಿಕ ಕಾಂಗ್ರೆಸ್ ನಾಯಕರಿಂದ ಯಾಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.
ರಾಜಕೀಯ ಕಾರಣದಿಂದ ನಡೆದ ವ್ಯವಸ್ಥಿತ ಅಪಪ್ರಚಾರ ಹಾಗೂ ಷಡ್ಯಂತ್ರಗಳಿಂದಾಗಿ ಒಂದು ಉತ್ತಮ ಪ್ರವಾಸಿ ತಾಣವಾಗಿ ಬೆಳೆಯುತ್ತಿದ್ದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಬ್ಧಗೊಂಡಿವೆ. ಸೂಕ್ತ ನಿರ್ವಹಣೆ ಇಲ್ಲದೆ ಅಲ್ಲಿನ ಕಟ್ಟಡಗಳು ಹಾಗೂ ವಸ್ತುಗಳು ಹಾಳಾಗುತ್ತಿವೆ. ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ 4.33 ಕೋಟಿ ರೂ. ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ರವೀಂದ್ರ ಮೊಯ್ಲಿ ಒತ್ತಾಯಿಸಿದರು.
ಬಿಜೆಪಿ ಮುಖಂಡ ಸುಮಿತ್ ಶೆಟ್ಟಿ, ಮಾತನಾಡಿ ‘ಫೈಬರ್ ಗ್ಯಾಂಗ್’ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಬಂಧನವಾದ ಕಳ್ಳರು ಕಾಂಗ್ರೆಸ್‌ನ ಬ್ರದರ್ಸ್ ಎಂದು ಆರೋಪಿಸಿ, ಫೈಬರ್ ಗ್ಯಾಂಗ್ ವಿರುದ್ಧ (ಸುಮೊಟೋ) ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಚುನಾವಣೆಗೆ ನಿಲ್ಲುತ್ತಿರುವುದೇ ಒಂದು ದುರಂತ ಕಥೆ ಎಂದು ವ್ಯಂಗ್ಯವಾಡಿದರು. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಕಳದ ಅಭಿವೃದ್ಧಿಯನ್ನು ಸಹಿಸದೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಉದಯಕುಮಾರ್ ಶೆಟ್ಟಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ನಿರಂಜನ್ ಜೈನ್, ಸುರೇಶ್ ಸಾಯಿರಾಂ ಬೈಲೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


.
.
