
ಕಾರ್ಕಳ, ಜ.14: ಕೇವಲ ವಿಧಾನಸಭಾ ಚುನಾವಣೆಯ ಲಾಭಕ್ಕಾಗಿ ಪರಶುರಾಮನ ನಕಲಿ ಪ್ರತಿಮೆ ನಿರ್ಮಿಸಿ ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಶಾಸಕ ಸುನಿಲ್ ಕುಮಾರ್ ಅವರು ತನ್ನ ತಪ್ಪನ್ನು ಪ್ರಾಮಾಣಿವಾಗಿ ಒಪ್ಪಿಕೊಳ್ಳದೇ ತನ್ನ ಹಿಂಬಾಲಕರ ಮೂಲಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ನಾಯಕರ ನಿರಂತರ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಹೇಳಿದ್ದಾರೆ.
ಅವರು ಬುಧವಾರ ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುತ್ವದ ಪ್ರತಿಪಾದಕರು ಎಂದು ಹೇಳಿಕೊಳ್ಳುವ ಬಿಜೆಪಿಯವರು ಪರಶುರಾಮ ಥೀಮ್ ಪಾರ್ಕಿನ ವಿಚಾರವಾಗಿ ಅಷ್ಟಮಂಗಲ ಇಡುವ ವಿಚಾರವನ್ನೇ ಅಪಹಾಸ್ಯ ಮಾಡಿದ್ದಾರೆ.ಉಮಿಕಲ್ ಬೆಟ್ಟದ ಮೇಲೆ ಬೆಂಕಿ ಕಾಣಿಸಿಕೊಳ್ಳುವುದು, ಮೂರ್ತಿ ಕಳ್ಳತನ ಹಾಗೂ ವಸ್ತುಗಳ ಕಳ್ಳತನದಂತಹ ದುರ್ಘಟನೆಗಳು ಏಕೆ ಸಂಭವಿಸುತ್ತವೆ ಎಂಬುದನ್ನು ತಿಳಿಯಲು ವಿದ್ವಾಂಸರು ಹಾಗೂ ಪುರೋಹಿತರನ್ನು ಒಳಗೊಂಡು ಅಷ್ಟಮಂಗಲ ಪ್ರಶ್ನೆ ಹಾಕಬೇಕು, ಇದರಿಂದ ಲೋಪವಾಗಿರುವ ವಿಚಾರ ಹೊರಗಡೆ ಬರಲಿದೆ,ಆದರೆ ಅಷ್ಟಮಂಗಲ ಪ್ರಶ್ನಾ ಚಿಂತನೆ ಹಾಕಿದರೆ ಪರಶುರಾಮನಿಗೆ ನಡೆದಿರುವ ಮೋಸ ಬಯಲಾಗುತ್ತದೆ ಎಂಬ ಭಯ ಬಿಜೆಪಿವರಿಗೆ ಕಾಡುತ್ತಿದೆ ಎಂದರು.
ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ಕಾರ್ಕಳದ ನಾಗರಿಕರು ಯಾರೂ ಮನವಿ ಸಲ್ಲಿಸಿರಲಿಲ್ಲ. ಸುನಿಲ್ ಕುಮಾರ್ ಅವರೇ ಸ್ವಯಂ ಪ್ರೇರಣೆಯಿಂದ ತುಳುನಾಡಿನ ದೈವೀಶಕ್ತಿಗಳಾದ ಕೋಟಿಚೆನ್ನಯ್ಯರ ಪಾದದ ಗುರುತುಗಳನ್ನು ನಾಶಮಾಡಿ ಅಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಿದ್ದಾರೆ.ಆದರೆ ದೈವಗಳ ಕಾರಣೀಕ ಶಕ್ತಿಯ ಫಲವಾಗಿ ಮಳೆಗಾಲದೊಳಗೆ ಪರಶುರಾಮನ ಮೂರ್ತಿಯ ಅಸಲಿ ಸತ್ಯ ಹೊರಬಂದಿದೆ ಎಂದರು.
ಪರಶುರಾಮ ಮೂರ್ತಿಯ ಅಸಲಿಯತ್ತಿನ ಕುರಿತು ಅನುಮಾನಗೊಂಡ ಸಮಾನ ಮನಸ್ಕ ಸಂಘಟನೆ ಉಪವಾಸ ಸತ್ಯಾಗ್ರಹ ನಡೆಸಿದರೂ, ಶಾಸಕ ಸುನಿಲ್ ಕುಮಾರ್ ಯಾವುದೇ ಚರ್ಚೆಗೆ ಮುಂದಾಗಲಿಲ್ಲ. ಬದಲಾಗಿ ಪ್ರಕರಣವನ್ನು ತಿರುವುಮಾಡಲು ಯತ್ನಿಸಿದ್ದಾರೆ. ತಪ್ಪು ಮಾಡಿಲ್ಲವೆಂದರೆ ತನಿಖೆಗೆ ಸಹಕರಿಸಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರ ತೇಜೋವಧೆಗೆ ಇಳಿದಿರುವುದು ಭ್ರಷ್ಟಾಚಾರದ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ ಎಂದು ಹೇಳಿದರು. ಉದ್ಘಾಟನಾ ಸಂದರ್ಭದಲ್ಲಿಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರ ಎಂದಿದ್ದ ಶಾಸಕರು, ಬಳಿಕ ಅದನ್ನು ಪ್ರವಾಸಿ ತಾಣ ಎಂದು ಹೇಳುತ್ತಿರುವುದು ದ್ವಂದ್ವ ನೀತಿಯಾಗಿದೆ. ಅದು ಪ್ರವಾಸಿ ತಾಣವಾಗಿದ್ದರೆ ಪರಶುರಾಮನ ಕಾಲಿನಡಿ ತುಳುನಾಡಿನ ದೈವಗಳನ್ನು ಚಿತ್ರಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಇದು ತುಳುನಾಡಿನ ಭಕ್ತರ ಭಾವನೆಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಆರೋಪಿಸಿದರು
ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ತುಳುನಾಡಿನ ದೈವಸ್ಥಾನಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮತ್ತು ಬಡ ಜನರ ಆರೋಗ್ಯ ಸೇವೆಗೆ ತಮ್ಮ ಪ್ರಾಮಾಣಿಕ ಸಂಪಾದನೆಯನ್ನು ದಾನ ಮಾಡಿದ ಧರ್ಮಿಷ್ಠ ನಾಯಕರು. ಅವರು ಎಲ್ಲಾ ಜಾತಿ, ಧರ್ಮ ಮತ್ತು ಸಮುದಾಯಗಳ ಜನರನ್ನು ಪ್ರೀತಿಸುವ, ಗೌರವಿಸುವ ವ್ಯಕ್ತಿತ್ವದವರು. ಇಂತಹ ಸಚ್ಚರಿತ್ರ‍್ಯವಂತ ನಾಯಕನ ಬಗ್ಗೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸುನಿಲ್ ಕುಮಾರ್ ಅವರ ಹಿಂಬಾಲಕರಿಗೆ ಮಾತನಾಡುವ ನೈತಿಕತೆಯಿಲ್ಲವೆಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಯುತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂತೋಷ್ ದೇವಾಡಿಗ, ಮಂಜುನಾಥ ಜೋಗಿ, ಅನಿಲ್ ಪೂಜಾರಿ ನೆಲ್ಲಿಗುಡ್ಡೆ, ವಿವೇಕಾನಂದ ಶೆಣೈ ಉಪಸ್ಥಿತರಿದ್ದರು.

.
.
.
.
