
ಕಾರ್ಕಳ,ಜ.20: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಅಂದಿನ ಸಚಿವರಾಗಿದ್ದ ಸುನಿಲ್ ಕುಮಾರ್ ಅವರು ನಿಟ್ಟೆ ಗ್ರಾಮದ ಮದೆನಾಡಿನಲ್ಲಿ ಸುಮಾರು 27 ಕೋ.ರೂ ವೆಚ್ಚದಲ್ಲಿ ಜವಳಿ ಪಾರ್ಕ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಇದಾಗಿದೆ ಎಂದು ಭರವಸೆ ನೀಡಿ,ಇದೀಗ ಶಿಲಾನ್ಯಾಸವಾಗಿ ಮೂರು ವರ್ಷಗಳಾದರೂ ಈವರೆಗೂ ಈ ಯೋಜನೆ ಕಾರ್ಯಗತವಾಗದೇ ಸಂಪೂರ್ಣ ಸ್ಥಗಿತಗೊಂಡಿದೆ.ಇದಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪ್ಪಾಡಿ ನೇಮಿರಾಜ ರೈ ಆರೋಪಿಸಿದರು.
ಅವರು ಜ.20 ರಂದು ಮಂಗಳವಾರ ಕಾರ್ಕಳ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಕೇವಲ ಚುನಾವಣೆಯ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಯೋಜನೆಯ ಸಾಧಕ ಬಾಧಕ ಚರ್ಚಿಸದೇ ಶಂಕುಸ್ಥಾಪನೆ ನಡೆಸಿ,3 ಸಾವಿರ ಉದ್ಯೋಗ ಸಿಗಲಿದೆ ಎಂದು ,ಸ್ಥಳೀಯ ಉದ್ಯಮಗಳು ಬೆಳೆಯಲಿವೆ ಎಂದು ಜನರನ್ನು ವಂಚಿಸಲಾಗಿದೆ,ಇದು ವಿಶ್ವಾಸದ್ರೋಹದ ನಾಟಕ ಎಂದು ಆರೋಪಿಸಿದರು.
ಈ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಗದಿಪಡಿಸಿದ್ದ 20 ಕೋ.ರೂ ಅನುದಾನವನ್ನು ಸಿಎಂ ಸಿದ್ದರಾಮಯ್ಯನವರು 27 ಕೋ.ರೂ ಗೆ ಹೆಚ್ಚಿಸಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುವ ಕುರಿತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು, ಆದರೆ ಈವರೆಗೂ ಈ ಯೋಜನೆ ಯಾಕೆ ಕಾರ್ಯಗತವಾಗಿಲ್ಲ ಎಂದು ನೇಮಿರಾಜ್ ರೈ ಪ್ರಶ್ನಿಸಿದರು.
ಈಗಾಗಲೇ ಈ ಯೋಜನೆಗೆ ಜಮೀನು ಮಂಜೂರಾಗಿದ್ದರೂ ನಿಟ್ಟೆಯಿಂದ ಬೇರೆ ಕಡೆಗೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ.ಸುನಿಲ್ ಕುಮಾರ್ ಅವರ ಕುಮ್ಮಕ್ಕಿನಿಂದ ಈ ಯೋಜನೆಯನ್ನು ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದ್ದು,ಈ ಮೂಲಕ ಸ್ಥಳೀಯರ ಅನ್ನದ ಬಟ್ಟಲಿಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಜವಳಿ ಪಾರ್ಕ್ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 20 ಕೋ.ರೂ ಯೋಜನೆಯಾಗಿದ್ದು, ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 27 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿತ್ತು. ಬಜೆಟ್‌ನಲ್ಲಿಯೂ ಯೋಜನೆಗೆ ಮನ್ನಣೆ ನೀಡಲಾಗಿತ್ತು. ಆದರೂ ಕಾರ್ಯಾರಂಭವಾಗದೇ ಇರುವುದರಿಂದ ಯೋಜನೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ ಎಂದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಈ ಯೋಜನೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ವಹಿಸಬೇಕು ಮತ್ತು ನಡೆದಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅನಂದ ಜೋಸೆಫ್ ಮದೆನಾಡು, ಮೊಹಮ್ಮದ್ ಹಸನ್
ನಿಟ್ಟೆ, ಶರತ್ ಶೆಟ್ಟಿ ಮದೆನಾಡು ಉಪಸ್ಥಿತರಿದ್ದರು.

.
.
.
.
