
ಕಾರ್ಕಳ,ಜ.28: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಮೂರನೇ ದಿನ ಸಹಸ್ರಾರು ಭಕ್ತಾದಿಗಳ ಭಕ್ತಿಭಾವದ ನಡುವೆ ಭವ್ಯವಾಗಿ ನೆರವೇರಿತು. ದಿನವಿಡೀ ಸುಮಾರು ಹತ್ತು ದಿವ್ಯ ಬಲಿಪೂಜೆಗಳು ನೆರವೇರಿದವು.
ಈ ವರ್ಷದ ಮಹೋತ್ಸವದ ಮುಖ್ಯ ಸಂದೇಶವಾಗಿರುವ “ನಾನು ನಿನ್ನನ್ನು ಪ್ರೀತಿಸಿದ್ದೇನೆ” ಎಂಬ ಧೈಯ ವಾಕ್ಯದ ಆಧಾರದ ಮೇಲೆ, ಬಡವರ ಬಗೆಗಿನ ಕಾಳಜಿ, ಮಾನವೀಯ ಸೇವೆ ಮತ್ತು ಸಮಾಜದತ್ತ ನಮ್ಮ ಜವಾಬ್ದಾರಿ ಕುರಿತು ಆಳವಾದ ಬೋಧನೆ ನೀಡಲಾಯಿತು. ಪ್ರೀತಿಯ ಸಾಕ್ಷಿಯಾಗಿ ಬಡವರೊಂದಿಗೆ ನಿಂತು, ದುರ್ಬಲರ ಕೈ ಹಿಡಿಯುವ ಕ್ರೈಸ್ತ ಜೀವನದ ಮಹತ್ವವನ್ನು ಯಾಜಕರು ವಿಶೇಷವಾಗಿ ಒತ್ತಿಹೇಳಿದರು.
ದಿನದ ಪ್ರಮುಖ ಹಾಗೂ ಆಡಂಬರದ ಸಾಂಭ್ರಮಿಕ ಬಲಿಪೂಜೆಯನ್ನು ಅಲಹಬಾದ್ ಧರ್ಮಪ್ರಾಂತ್ಯದ ಪರಮಪೂಜ್ಯ ಲುವಿಸ್ ಮಸ್ಕರೇನ್ಹಸ್ ಅವರು ಭಕ್ತಿಭಾವದಿಂದ ಅರ್ಪಿಸಿ ನಾವೆಲ್ಲರು ಬಡವೆರೆಡೆಗೆ ನಮ್ಮ ಏಕಾಗ್ರತೆಯನ್ನು ನೀಡಬೇಕು. ಅವರೆಲ್ಲರು ಕ್ರಿಸ್ತನ ಪ್ರತಿರೂಪ. ಬಡವರೊಂದಿಗೆ ಕ್ರೈಸ್ತ ಜೀವನ ಸರಿದೂಗಿ ನಡೆಯಬೇಕು ಎಂದು ಸಂದೇಶವನ್ನಿತ್ತರು. ವಿವಿಧ ಯಾಜಕರು ಸಹಭಾಗಿಯಾಗಿ, ಭಕ್ತಾದಿಗಳ ಸಮ್ಮುಖದಲ್ಲಿ ದಿವ್ಯ ಬಲಿಪೂಜೆ, ಆರಾಧನೆ ಮತ್ತು ವಿವಿಧ ಭಕ್ತಿಕಾರ್ಯಗಳನ್ನು ನೆರವೇರಿಸಿದರು.
ಅತ್ತೂರು ಪುಣ್ಯಕ್ಷೇತ್ರವು ತನ್ನ ಕಾರ್ಣಿಕ ಹಾಗೂ ಪವಾಡಗಳಿಗೆ ಪ್ರಸಿದ್ಧವಾಗಿದ್ದು, ವಿವಿಧ ಧರ್ಮದ ಭಕ್ತರು ಭಕ್ತಿಭಾವದಿಂದ ಭಾಗವಹಿಸಿದರು. ಭಕ್ತರು ಮೊಂಬತ್ತಿ ಬೆಳಗಿಸಿ, ಹರಕೆ ಸಲ್ಲಿಸಿ, ಸಂತ ಲಾರೆನ್ಸ್ ಅವರ ವಿಶೇಷ ಅವಶೇಷಗಳನ್ನು ಕಂಡು ಆಶೀರ್ವಾದ ಪಡೆದರು. ಪವಿತ್ರ ನೀರಿನ ಕೊಳದ ಬಳಿ ನೀರನ್ನು ಚಿಮುಕಿಸಿ, ಪುಷ್ಪಪ್ರಸಾದ ಹಾಗೂ ಪ್ರೋಕ್ಷ ತೀರ್ಥವನ್ನು ಸ್ವೀಕರಿಸಿ, ತಮ್ಮ ಕೃತಜ್ಞತೆ ಮತ್ತು ನಂಬಿಕೆಯನ್ನು ವ್ಯಕ್ತಪಡಿಸಿದರು.
ಮಹೋತ್ಸವಕ್ಕೆ ಹಲವು ಗಣ್ಯ ವ್ಯಕ್ತಿಗಳಾದ ಮಾಜಿ ಸಚಿವ ರಮಾನಾಥ್ ರೈ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪದ್ಮರಾಜ್ ಹೆಗ್ಡೆ, ದಿನೇಶ್ ಹೆಗ್ಡೆ, ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್, ನಿಯೋಜಿತ ಉಪಾಧ್ಯಕ್ಷ ವಂದೀಶ್ ಮಥಾಯಸ್, ನಿಯೋಜಿತ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತಲಿನೊ, ಪಿಯುಸ್ ರೊಡ್ರಿಗಸ್ ಉಪಸ್ಥಿತರಿದ್ದು, ಭಕ್ತಾದಿಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ಪುಣ್ಯಕ್ಷೇತ್ರವು ವೈಭವಯುತ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದ್ದು,
ಕುಟುಂಬ ಸಮೇತರಾಗಿ ಬಂದ ಭಕ್ತರು, ಪ್ರಾರ್ಥನೆ, ಭಕ್ತಿ, ಸಂಭ್ರಮ ಮತ್ತು ಆತ್ಮೀಯತೆಯೊಂದಿಗೆ ಈ ಪವಿತ್ರ ಹಬ್ಬವನ್ನು ಆಚರಿಸಿದರು.
ಅತ್ತೂರು ಸಂತ ಲಾರೆನ್ಸ್ ಮಹೋತ್ಸವವು ಧಾರ್ಮಿಕ ಭಕ್ತಿಭಾವ, ಸಾಮಾಜಿಕ ಸೇವಾ ಸಂದೇಶ ಮತ್ತು ಜನಸಾಮಾನ್ಯರ ಐಕ್ಯತೆಯನ್ನು ಪ್ರತಿಬಿಂಬಿಸುವ ಮಹತ್ತರ ಧಾರ್ಮಿಕ ಉತ್ಸವವಾಗಿ ಮೂಡಿಬಂದಿತು.

.
.
.
.
