
ಕಾರ್ಕಳ,ಫೆ09: ಮನೆಮನೆಯ ಕಸವನ್ನು ವಿಂಗಡಣೆ ಮಾಡಿ ಪೌರ ಕಾರ್ಮಿಕರಿಗೆ ಕೊಡಬೇಕೆಂಬ ನಿಯಮವಿದ್ದರೂ ಕಾರ್ಕಳದ ತಾಲೂಕು ಕಚೇರಿ ಬಳಿಯ ಟೈಟಾನಿಕ್ ಅಪಾರ್ಟ್ಮೆಂಟ್ ವಾಸಿಗಳು ಮಾತ್ರ ಈ ನಿಯಮಪಾಲನೆ ಮಾಡದೇ ಕಸವನ್ನು ಪುರಸಭೆಯ ಪೌರ ಕಾರ್ಮಿಕರಿಗೆ ನೀಡುತ್ತಿದ್ದು, ಇಂತಹ ಕಸವನ್ನು ಸಂಗ್ರಹಿಸಲು ಪೌರ ಕಾರ್ಮಿಕರು ನಿರಾಕರಿಸಿದ್ದರು. ಕಸವನ್ನು ವಿಂಗಡಣೆ ಮಾಡಿ ಕೊಡಬೇಕೆಂದು ಮನವಿ ಮಾಡಿದರೂ ಫ್ಲಾಟ್ ಮಾಲೀಕರು ಉಡಾಫೆಯಿಂದ ವರ್ತಿಸಿದ್ದು, ಕಸವನ್ನು ರಸ್ತೆಯ ಬದಿಯಲ್ಲೇ ಸುರಿದ್ದು ಉದ್ಧಟತನ ತೋರಿಸಿದ್ದು, ಇದರ ವಿರುದ್ಧ ಕಾರ್ಕಳ ಪುರಸಭೆ ಅಧಿಕಾರಿಗಳು ಗರಂ ಆಗಿದ್ದಾರೆ.
ಟೈಟಾನಿಕ್ ಎಂಬ ಹೆಸರಿನ ವಸತಿ ಸಮುಚ್ಚಯದಲ್ಲಿ ಸುಮಾರು 13 ಮನೆಗಳಿದ್ದು ಅವರು ನಿತ್ಯ ಬಳಸುವ ಹಸಿ ಹಾಗೂ ಒಣ ಕಸವನ್ನು ವಿಂಗಡಿಸದೇ ಎಲ್ಲವನ್ನು ಒಂದೇ ಚೀಲದಲ್ಲಿ ತುಂಬಿಸಿ ಪುರಸಭೆಯ ವಾಹನಕ್ಕೆ ಕೊಡುತ್ತಿದ್ದರು. ಕಸವನ್ನು ವಿಂಗಡಿಸಿ ಕೊಡುವಂತೆ ಪೌರ ಕಾರ್ಮಿಕರು ಸಾಕಷ್ಟು ಬಾರಿ ಮನವಿ ಮಾಡಿದರೂ ಫ್ಲಾಟ್ ಮಾಲೀಕರು ಮಾತ್ರ ಕ್ಯಾರೇ ಮಾಡಿಲ್ಲವೆನ್ನುವುದು ಅಧಿಕಾರಿಗಳ ಆರೋಪ. ಕಸ ವಿಂಗಡಣೆಗೆ ಒಪ್ಪದೇ ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದ ಪರಿಣಾಮ ಹಸಿ ತ್ಯಾಜ್ಯ ಕೊಳೆತು ವಾಸನೆ ಬರಲಾರಂಭಿಸಿದೆ. ಇದರಿಂದ ಸ್ಥಳೀಯರು ಕಾರ್ಕಳ ಪುರಸಭೆಗೆ ದೂರು ನೀಡಿದ್ದರು.ಈ ಹಿನ್ನಲೆಯಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್ ಸ್ಥಳಕ್ಕೆ ಧಾವಿಸಿ ಫ್ಲಾಟ್ ನಿವಾಸಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮನೆಯ ಕಸವನ್ನು ಸರಿಯಾಗಿ ವಿಂಗಡಿಸದೇ ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದ ಮನೆಗಳ ಮಾಲೀಕರ ವಿರುದ್ಧ ದಂಡದ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೇ ಮುಂದೆ ಕಸ ವಿಂಗಡಿಸಿ ಕೊಡುವಂತೆ ಸೂಚಿಸಿ ಅಪಾರ್ಟ್ಮೆಂಟ್ ಮಾಲೀಕರಿಗೆ 2 ಸಾವಿರ ದಂಡ ವಿಧಿಸಿದ್ದಾರೆ.

.
.
.
.
.
.
.

.
.
.
.
