
ಬೆಂಗಳೂರು,ಮಾ7 : ಸಾಲ ಮಾಡದೇ ಯಾವುದೇ ಕುಟುಂಬ, ದೇಶ, ರಾಜ್ಯವಾಗಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಆದರೆ, ವಿತ್ತೀಯ ಶಿಸ್ತು ಮಾನದಂಡದ ಒಳಗಡೆ ಇರಬೇಕು ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಬಜೆಟ್ ಮಂಡನೆಯ ಬಳಿಕ ಮಾತನಾಡಿ,ನಾವು ಸಾಲಗಾರರಾಗಿಲ್ಲ. ಹಣಕಾಸು ಹೊಣೆಗಾರಿಕೆ ಅಧಿನಿಯಮದ ಮಾನದಂಡದ ಒಳಗೆ ಇದ್ದೇವೆ. ಹಣಕಾಸು ಹೊಣೆಗಾರಿಕೆ ಅಧಿನಿಯಮದ ಪ್ರಕಾರ ವಿತ್ತೀಯ ಕೊರತೆ ಜಿಡಿಪಿಯ ಶೇ.3ರ ಒಳಗಡೆ ಇರಬೇಕು. ಒಟ್ಟು ಹೊಣೆಗಾರಿಕೆ ಜಿಡಿಪಿಯ ಶೇ25ರ ಒಳಗಡೆ ಇರಬೇಕು. 2026-27 ಸಾಲಿನಲ್ಲಿ ರಾಜ್ಯದ ಜಿಡಿಪಿ 33.05 ಲಕ್ಷ ಕೋಟಿ ಇರಲಿದೆ. ಅದರಲ್ಲಿ ನಮ್ಮ ಸಾಲ ಒಟ್ಟು 8.24 ಲಕ್ಷ ಕೋಟಿ ಆಗಲಿದೆ. ಇದು ರಾಜ್ಯ ಜಿಡಿಪಿಯ ಶೇ.24.94ರಷ್ಟು ಆಗಲಿದೆ ಎಂದರು.
ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಲಾಗಿದ್ದು, ಈ ಬಾರಿ ಬಜೆಟ್ ಗಾತ್ರ 4.48 ಲಕ್ಷ ಕೋಟಿ ಆಗಿದೆ. ಈ ಬಾರಿ ಸುಮಾರು 38,455 ಕೋಟಿ ರೂ.ಗಳಷ್ಟು ಅಂದರೆ ಶೇ 9.4ರಷ್ಟು ಹೆಚ್ಚಳವಾಗಿದೆ. ಜಿಎಸ್ಟಿ ಸರಳೀಕರಣದಿಂದ ನಮ್ಮ ತೆರಿಗೆ ವೃದ್ಧಿ 4%ಗೆ ಇಳಿಕೆಯಾಗಿದೆ. ಕೆಲ ರಾಜ್ಯಗಳಲ್ಲಿ ಈಗಲೂ ಚೇತರಿಸಿಕೊಂಡಿಲ್ಲ. ಇಷ್ಟೆಲ್ಲ ಆದರೂ ಜಿಎಸ್ಟಿ ಸಂಗ್ರಹದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ತೆರಿಗೆಯಲ್ಲಿ ನಮಗೆ 15 ಸಾವಿರ ಕೋಟಿ ತೆರಿಗೆ ಸಂಗ್ರಹ ಕೊರತೆಯಾಗಿದೆ. ಮುಂದಿನ ವರ್ಷವೂ ಇದು ಮುಂದುವರೆಯಲಿದೆ ಎಂದರು.
ಕೇAದ್ರ ಸರ್ಕಾರ ಮಾಡಿರುವ ಸಾಲ 218 ಲಕ್ಷ ಕೋಟಿಗೂ ಹೆಚ್ಚಿದೆ. ಈ ವರ್ಷ ಅವರು 17.20 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ಗೆ ಈ ಬಗ್ಗೆ ಹೇಳಲು ಏನು ಹಕ್ಕಿದೆ. ನಾವು ಅಧಿಕಾರಕ್ಕೆ ಬರುವಾಗ 5.52 ಲಕ್ಷ ಕೋಟಿ ಸಾಲ ಇತ್ತು. ಈಗ ಮೂರು ವರ್ಷ ಆಗುತ್ತಿದೆ. ಎಲ್ಲಾ ಕಾಲದಲ್ಲೂ ಸಾಲ ಮಾಡಿದ್ದಾರೆ. ಅವರ ಕಾಲದಲ್ಲೂ ಸಾಲ ಮಾಡಲಾಗಿದೆ ಎಂದರು.


.
.
.
.
.
.
.
.
.
.
