
ಕಾರ್ಕಳ,ಮಾ14: ಕರಾವಳಿಯವರು ಉದ್ಯೋಗ ಅರಸಿಕೊಂಡು ಮುಂಬಯಿ ಮಹಾನಗರಕ್ಕೆ ಹೋಗಿ ಅಲ್ಲಿ ಉದ್ಯಮ ಕಟ್ಟಿ ಯಶಸ್ಸು ಸಂಪಾದಿಸಿದ್ದಾರೆ.ನಮ್ಮೂರಿನ ಉದ್ಯಮಿಗಳು ತಮ್ಮ ಉದ್ಯಮದ ಜೊತೆಜೊತೆಗೆ ಕರಾವಳಿಯ ಗಂಡು ಕಲೆಯಾದ ಯಕ್ಷಗಾನವನ್ನು ಹಾಗೂ ಕಲಾವಿದರನ್ನು ನಿರಂತರ ಪೋಷಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.
ಅವರು ಮಾ. 10 ರಂದು ಅಜೆಕಾರು ರಾಮ ಮಂದಿರದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಹಾ ನಗರಿ ಮುಂಬಯಿಯಲ್ಲಿ ಯಕ್ಷಗಾನ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಸ್ಮರಣೀಯವಾಗಿದೆ.ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಮುಂಬಯಿಯಲ್ಲಿ ಪುರುಷರು ,ಮಹಿಳೆಯರು ಹಾಗೂ ಮಕ್ಕಳಿಗೆ ಯಕ್ಷಗಾನ ಹೆಜ್ಜೆ ಕಲಿಸುವ ಮೂಲಕ ಅಸಂಖ್ಯಾತ ಯುವ ಕಲಾವಿದರನ್ನು ಹುಟ್ಟುಹಾಕಿದ್ದಾರೆ. ಇದೀಗ ಈ ಸಂಘಟನೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಮಾತನಾಡಿ, ಎರಡು ದಶಕಗಳಿಗಿಂತಲೂ ಹಿಂದೆ ಮುಂಬಯಿಯಲ್ಲಿ ಹುಟ್ಟಿಕೊಂಡ ಅಜೆಕಾರು ಕಲಾಭಿಮಾನಿ ಬಳಗವು ಊರಿನ ಶ್ರೆಷ್ಠ ಕಲಾವಿದರನ್ನು ಕರೆಸಿ ಯಕ್ಷಗಾನದ ಸರಣಿ ತಾಳಮದ್ದಳೆ, ಬಯಲಾಟ, ಗ್ರಂಥ ಪ್ರಕಟಣೆಗಳಲ್ಲದೇ ಕಲಾವಿದರಿಗೆ ಗೌರವಾರ್ಪಣೆ ಮತ್ತು ನಿಧಿ ಸಮರ್ಪಣೆಯನ್ನೂ ಮಾಡಿಕೊಂಡು ಬಂದಿದೆ. ಇದಕ್ಕೆ ಮುಂಬೈಯ ಕಲಾಭಿಮಾನಿಗಳ ಮತ್ತು ಉದ್ಯಮಿಗಳು ಸಹಕಾರ ಸ್ಮರಣೀಯ. ಇದೀಗ ಬೆಳ್ಳಿ ಹಬ್ಬದ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸುವ ಉದ್ದೇಶದಿಂದ ಯಕ್ಷಗಾನ ಸಮ್ಮೇಳನ – 2026 ವನ್ನು ಆಯೋಜಿಸಲಾಗಿದ್ದು, ಶೀಘ್ರದಲ್ಲಿಯೇ ಸ್ವಾಗತ ಸಮಿತಿಯನ್ನು ರಚಿಸಲಾಗುವುದು ಎಂದರು.
ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾತನಾಡಿ, ‘ದಿ|ಎಚ್.ಬಿ.ಎಲ್.ರಾವ್ ಅವರ ಬಳಿಕ ಮುಂಬಯಿಯಲ್ಲಿ ಯಕ್ಷಗಾನದ ಸಮ್ಮೇಳನ ನಡೆಸುವ ಸಾಹಸಕ್ಕೆ ಯಾರೂ ಕೈ ಹಾಕಿರಲಿಲ್ಲ.ಇದೀಗ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ತಮ್ಮ ಬಳಗದ ರಜತ ಸಂಭ್ರಮದ ಅಂಗವಾಗಿ ಯಕ್ಷಗಾನ ಸಮ್ಮೇಳನ ಆಯೋಜಿಸಿ ಮುಂಬಯಿ ಯಕ್ಷಗಾನದ ಇತಿಹಾಸದಲ್ಲಿ ಮತ್ತೊಂದು ಸಾಧನೆಗೆ ಮುಂದಾಗಿದ್ದಾರೆ ಎಂದರು ಅಕ್ಟೋಬರ್ 24 ಮತ್ತು 25ರಂದು ಯಕ್ಷಗಾನಕ್ಕೆ ಸಂಬಂಧಿಸಿ ವಿವಿಧ ಗೋಷ್ಟಿಗಳು, ಪ್ರದರ್ಶನ – ಪ್ರಾತ್ಯಕ್ಷಿಕೆ ಹಾಗೂ ಕಲಾವಿದರು, ಕಲಾಪೋಷಕರ ಸನ್ಮಾನದ ಮೂಲಕ ಎರಡು ದಿನಗಳ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಲಿದ್ದು, ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆಯೊಂದನ್ನು ಹೊರತರಲಾಗುವುದು ಎಂದು ನುಡಿದರು.
ಹಿರಿಯ ಯಕ್ಷಗಾನ ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ.ರಮೇಶ ಆಚಾರ್ಯ ತೀರ್ಥಹಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬಳಂತಿಮೊಗರು, ಸದಾಶಿವ ಆಳ್ವ ತಲಪಾಡಿ, ದೀವಿತ್ ಎಸ್.ಕೆ. ಪೆರಾಡಿ, ಪ್ರಸಾದ್ ಸವಣೂರು, ಉದ್ಯಮಿ ವಿಜಯ ಶೆಟ್ಟಿ ಅಜೆಕಾರು ಮತ್ತು ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಸಭೆಯಲ್ಲಿ ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.


.
.
.
.
.
.
.
.
.
.
