
ಮಂಗಳೂರು,ಜು.1: ಮಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಂಗಳೂರು ನಗರದ ಕಂಕನಾಡಿಯಲ್ಲಿ ಹಳೆಯ ಹಂಚಿನ ಮನೆಯೊಂದರ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ಬಿದ್ದು ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬುಧವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದ್ದು ಮನೆಯೊಳಗೆ ನಿದ್ದೆಯ ಮಂಪರಿನಲ್ಲಿದ್ದ ಒಬ್ಬ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಭಾರೀ ಮಳೆಗೆ ಮನೆಯ ಸಮೀಪದ ತಡೆಗೋಡೆ ಕುಸಿದು ಮನೆಯ ಮೇಲ್ಛಾವಣಿಗೆ ಬಿದ್ದ ಪರಿಣಾಮ ಮನೆ ಕುಸಿದು ಈ ದುರಂತ ಸಂಭವಿಸಿದೆ.
ಘಟನೆಯ ನಡೆದ ತಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೇಲ್ಚಾವಣಿಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಒಬ್ಬ ಪುರುಷ ಹಾಗೂ ಇಬ್ಬರು ಬಾಲಕಿಯರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟವರು ಬಿಹಾರ ಮೂಲದವರು ಎಂದು ತಿಳಿದು ಬಂದಿದ್ದು, ಒಟ್ಟು ನಾಲ್ಕು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದವು. ಈ ಪೈಕಿ ಒಂದು ಮನೆಯಲ್ಲಿ ಬಿಹಾರ ಮೂಲದ ಕುಟುಂಬ ವಾಸವಿತ್ತು. ಗಂಡ ಲಾಲ್ ಬಾಬು, ಪತ್ನಿ ಇಂದು, ಮಕ್ಕಳಾದ ಅನುಷಾ, ಅಲ್ಕಾ, ಅನಾಮಿಕ ಚೌರಾಸಿಯ, ಪರಿ ಜೊತೆ ವಾಸವಾಗಿದ್ದರು. ಈ ಪೈಕಿ ಅನಾಮಿಕ ಚೌರಾಸಿಯ(8), ಪರಿ (4) ಮೃತಪಟ್ಟಿದ್ದಾರೆ. ಲಾಲ್ ಬಾಬು ಹಾಗೂ ಪತ್ನಿ ಇಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೊಂದು ಮನೆಯಲ್ಲಿ ಬಾಲಕೃಷ್ಣ, ಶಾಂತಾ ದಂಪತಿ ವಾಸವಾಗಿದ್ದರು. ಇದರಲ್ಲಿ ಮಹಿಳೆ ಶಾಂತ (46) ಸಾವಿಗೀಡಾಗಿದ್ದಾರೆ. ಸದ್ಯ ಗಾಯಾಳುಗಳಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
