
ಕಾರ್ಕಳ,ಜು.26 :ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿ ಕೋಟ್ಯಾಂತರ ವಿದ್ಯಾರ್ಥಿಗಳ ಬಾಳಿನಲ್ಲಿ ಚೆಲ್ಲಾಟವಾಡಿದ ಭ್ರಷ್ಟಾಚಾರ ಎಸಗಿ ಸಾಂವಿಧಾನಿಕ ಸಂಸ್ಥೆ ಸೇರಿದಂತೆ ಎಲ್ಲೆಡೆಯಲ್ಲೂ ಮೋದಿ ನೇತೃತ್ವದ ಭ್ರಷ್ಟ ಸರಕಾರದಿಂದ ಲೂಟಿ ನಡೆಯುತ್ತಿದೆ.ಆದ್ದರಿಂದ ಬಿಜೆಪಿಯವರು ಭಾರತ ಬಿಟ್ಟು ತೊಲಗಿ ಎನ್ನುವ ಚಳುವಳಿ ಮಾಡುವುದಾಗಿ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಜು. 25ರಂದು ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಹೆಬ್ರಿ ಹಾಗೂ NSUI ಆಶ್ರಯದಲ್ಲಿ ನೀಟ್ ಅಕ್ರಮ, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ಅನಂತಶಯನ ವೃತ್ತದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ನರೇಂದ್ರ ಮೋದಿ ನೇತೃತ್ವದ ಭ್ರಷ್ಟ ಬಿಜೆಪಿ ಕೇಂದ್ರ ಸರಕಾರವು ರಾಮ ಮಂದಿರ ,ನೀಟ್ ಹಗರಣ ಸೇರಿದಂತೆ ಸಾಲು ಸಾಲು ಹಗರಣದಲ್ಲಿ ಭಾಗಿಯಾಗಿದೆ. ನೀಟ್ ಪರೀಕ್ಷಾ ಅಕ್ರಮದಲ್ಲಿ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೂ ಪ್ರಧಾನಿಯವರು ಏನೂ ಹೇಳದೆ ಆರ್ಎಸ್ಎಸ್ನವರ ಒತ್ತಡಕ್ಕೆ ಮಣಿದು ಮಧ್ಯರಾತ್ರಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಯುವ ಸಮುದಾಯ ಜಾಗೃತವಾಗಿದೆ, ಪ್ರಧಾನಿಯವರು ದೇಶ ಬಿಟ್ಟು ತೊಲಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಪ್ರಧಾನಿಯವರು ಸಂಸತ್ತಿನಲ್ಲಿ ಮಕ್ಕಳ ಭರವಸೆಗಳನ್ನು ಈಡೇರಿಸಲಿ ಎಂದು ಒತ್ತಾಯಿಸಿದರು.
ಕಂಬಳ, ಕೋಳಿ ಅಂಕದ ಬಗ್ಗೆ ಮಾತನಾಡುವ ಕಾರ್ಕಳದ ಶಾಸಕರು ಈಗ ಮೌನವಾಗಿದ್ದಾರೆ. ಅವರು ಬಾಯಿ ಬಿಟ್ಟು ವಿದ್ಯಾರ್ಥಿಗಳ ಪರ ಮಾತನಾಡಲಿ. ಇನ್ನು ಪ್ರತಿ ವಿಷಯದಲ್ಲೂ ರಾಜಕೀಯವಾಗಿ ಪ್ರತಿಕ್ರಿಯಿಸುವ ಪೇಜಾವರ ಸ್ವಾಮೀಜಿಯವರು ರಾಮಮಂದಿರ ಲೂಟಿ, ನೀಟ್ ಅಕ್ರಮದ ಬಗ್ಗೆ ಸುಮ್ಮನಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಬಿಜೆಪಿ ಪಕ್ಷವನ್ನು ದೇಶದಿಂದ ಕಿತ್ತೊಗೆಯಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆಯಾಗಿದೆ. ಇದನ್ನು ವಿರೋಧಿಸಿ ನ್ಯಾಯಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡುವ ಮೂಲಕ ಕೇಂದ್ರ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಿದೆ. ವಿದ್ಯಾರ್ಥಿಗಳ ಮೂರು ಬೇಡಿಕೆಗಳಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಬಿಜೆಪಿ ತೀವ್ರ ಮುಖಭಂಗವಾಗಿದೆ. ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿಗಳ ಮೇಲಿನ FIR ರದ್ದುಪಡಿಸಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ಕೊಡಬೇಕು, ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳ ಜೊತೆಗೂಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ಚಂದ್ರಪಾಲ್ ನಕ್ರೆ, ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಕಳ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಬ್ಲಾಕ್ ಅಧ್ಯಕ್ಷ ಶುಭದ ರಾವ್ ಸೇರಿದಂತೆ ಕಾಂಗ್ರೆಸ್ ನಾಯಕರು ಮಾತನಾಡಿ ನೀಟ್ ಅಕ್ರಮ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸುಭಿತ್ ಎನ್.ಆರ್., ಪ್ರತಿಮಾ ರಾಣೆ, ಗ್ಯಾರಂಟಿ ಅನುಷ್ಠಾನ ಸಮಿತಿ ಹೆಬ್ರಿ ತಾಲೂಕು ಅಧ್ಯಕ್ಷ ಶಂಕರ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಕೃಷ್ಣ ಶೆಟ್ಟಿ ಬಜಗೋಳಿ, ಯೋಗೀಶ್ ಆಚಾರ್ಯ ಇನ್ನಾ, ಮಂಜುನಾಥ್ ಜೋಗಿ, ಜಾರ್ಜ್ ಕ್ಯಾಸ್ತಲಿನೋ, ಸುಧಾಕರ ಶೆಟ್ಟಿ ಮುಡಾರು, ಶಬ್ಬೀರ್ ಮಿಯ್ಯಾರು, ನವೀನ್ ದೇವಾಡಿಗ, ಮಾಲಿನಿ ರೈ, ಭಾನು ಭಾಸ್ಕರ್ ಸೇರಿದಂತೆ ಕಾರ್ಕಳ- ಹೆಬ್ರಿ ಬ್ಲಾಕ್ ಕಾಂಗ್ರೆಸ್ನ ವಿವಿಧ ಘಟಕದ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಗ್ರಾಮ ಸಮಿತಿ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.



.
.
.
.
.
.
.
.
.
.
.
.
.
.
.
.
.
.
.
.
