
ಹೆಬ್ರಿ:,ಜು.28: ಪಶ್ಚಿಮ ಘಟ್ಟ ತಪ್ಪಲಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಬ್ಬಿನಾಲೆಯಲ್ಲಿ ಬೆಂಗಳೂರು ಮೂಲದ ರೈನಥನ್ ಸಂಸ್ಥೆಯು ಮಳೆ ನಡಿಗೆ ಎನ್ನುವ ಕಾರ್ಯಕ್ರಮವನ್ನು ಅಯೋಜಿಸಲು ಸಜ್ಜಾಗಿದೆ. ಆದರೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಮಳೆ ನಡಿಗೆಗೆ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಪ್ರವಾಸಿಗರು ಮೋಜು ಮಸ್ತಿಗಾಗಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಮನೋರಂಜನೆ ಹಾಗೂ ಆಟೋಟ ಚಟುವಟಿಕೆಗಳನ್ನು ನಡೆಸದಂತೆ ಅರಣ್ಯ ಇಲಾಖೆಗೆ , ಪಂಚಾಯಿತಿ ಆಡಳಿತ ಹಾಗೂ ಪೊಲೀಸರಿಗೆ ದೂರು ನೀಡಿದೆ.
ಬೆಂಗಳೂರಿನ ರೈನಾಥನ್ ಸಂಸ್ಥೆಯು ಪ್ರತೀವರ್ಷ ಮಳೆನಡಿಗೆ ಎನ್ನುವ ಕಾರ್ಯಕ್ರಮ ನಡೆಸುತ್ತಿದ್ದು ಈ ಬಾರಿ ಹೆಬ್ರಿ ಸಮೀಪದ ಕಬ್ಬಿನಾಲೆಯಲ್ಲಿ ಆಯೋಜಿಸಲು ನಿರ್ಧರಿಸಿದೆ.ಈ ಮಳೆ ನಡಿಗೆ ಕಾರ್ಯಕ್ರಮಕ್ಕೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದ್ದು, ಇದೇ ಆಗಸ್ಟ್ 1 ರಂದು ಶನಿವಾರ ಈ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ರೈನಾಥನ್ ಸಂಸ್ಥೆಯು ತನ್ನ ವೆಬ್ ಸೈಟ್ ನಲ್ಲಿ ನೊಂದಾವಣೆ ಅರಂಭವಾಗಿದೆ. ನಗರದ ಪ್ರವಾಸಿಗರಿಗೆ ಹಳ್ಳಿ ಹಾಗೂ ಕಾಡಿನ ಬದುಕನ್ನು ಪರಿಚಯಿಸುವ ಪ್ರಯತ್ನದ ಜೊತೆಗೆ ಮಳೆಯಲ್ಲಿ ನಡೆದುಕೊಂಡು ಹೋಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಇದಾಗಿದೆ ಎಂದು ಆಯೋಜಕರು ಸ್ಪಷ್ಟನೆ ನೀಡಿದರೂ, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ತಲಾ 4100 ಹಾಗೂ 1600 ದರ ನಿಗದಿಪಡಿಸಿದ್ದು ಇದೊಂದು ಕಮರ್ಷಿಯಲ್ ಇವೆಂಟ್, ರೈನಾಥನ್ ಸಂಸ್ಥೆಯ ಲಾಭಗಳಿಸುವ ಉದ್ದೇಶದ ಜೊತೆಗೆ ಪ್ರವಾಸಿಗರಿಗೆ ಆಟೋಟ, ಹಾಗು ಟ್ರೆಕ್ಕಿಂಗ್ ಅಸೆ ತೋರಿಸಿ ಹಣ ಪೀಕುವ ಕಾರ್ಯಕ್ರಮ ಇದಾಗಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.
ಪ್ರವಾಸಿಗರಿಗೆ ಅರಣ್ಯ ಇಲಾಖೆ ವತಿಯಿಂದ ನಿರ್ದಿಷ್ಠ ಪ್ರದೇಶದಲ್ಲಿ ಚಾರಣ ನಡೆಸಲು ಆನ್ಲೈನ್ ಮೂಲಕ ನೋಂದಣಿಮಾಡಲು ಅವಕಾಶವಿದ್ದು ರೈನಾಥನ್ ಸಂಸ್ಥೆಯು ಈ ಮೇಲ್ ಮೂಲಕ ಅರಣ್ಯದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕೋರಿದ್ದಾರೆ. ಪರಿಸರವಾದಿಗಳ ಹಾಗು ಸ್ಥಳೀಯರ ವಿರೋಧದ ವ್ಯಕ್ತವಾಗುತಿದ್ದಂತೆ ವನ್ಯಜೀವಿ ವಿಭಾಗದ ಅಧಿಕಾರಿಗಳು ನಾವು ಯಾವುದೇ ಕಾರಣಕ್ಕೂ ವನ್ಯಜೀವಿ ವಿಬಾಗದಲ್ಲಿ ಯಾವುದೇ ಚಟುವಟಿಕೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಠ ಪಡಿಸಿದ್ದು ಅರ್ಜಿದಾರರಿಗೆ ಹಿಂಬರಹ ನೀಡುವುದಾಗಿ ತಿಳಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪೂರ್ವಾನುಮತಿ ಪಡೆಯದೇ ಕಾರ್ಯಕ್ರಮ ಆಯೋಜಿಸುವುದು, ಅದಕ್ಕಾಗಿ ಸಾವಿರಗಟ್ಟಲೆ ಶುಲ್ಕ ಸಂಗ್ರಹಿಸುವುದು ಖಂಡನೀಯ. ಪ್ರವಾಸಿಗರು ತಮಗಿಷ್ಟ ಬಂದAತೆ ಗುಂಪು ಕಟ್ಟಿಕೊಂಡು ಟ್ರೆಕ್ಕಿಂಗ್ ಹೋಗುವುದು, ಜಲಪಾತಗಳಿಗೆ ತೆರಳುವುದು, ಛಾಯಾಗ್ರಹಣ ಮಾಡುವುದು, ತಮ್ಮ ಮನರಂಜನೆಗಾಗಿ ವನ್ಯಜೀವಿಗಳ ಸಹಜ ಜೀವನಕ್ಕೆ ಅಡ್ಡಿ ಪಡಿಸುವುದಕ್ಕೆ ಅವಕಾಶವಿಲ್ಲ, ನಿಷೇಧಿತ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಬೇಕೆಂದು ಪರಿಸರ ಪ್ರೇಮಿ ನಾಗರಾಜ ಕೂವೆ ಹೇಳಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
