
ಬೆಂಗಳೂರು, ಆ.03:ಸ್ಪೀಕರ್ ಹಾಗೂ ಉಪಸಭಾಪತಿ ಸ್ಥಾನ ಸಂವಿಧಾನಾತ್ಮಕ ಹುದ್ದೆಗಳಾಗಿವೆ. ಇವುಗಳ ಆಯ್ಕೆ ಪ್ರಕ್ರಿಯೆಗೆ ಅದರದ್ದೇ ಆದ ಮಾರ್ಗ ಹಾಗೂ ನಿಯಮಾವಳಿಗಳಿವೆ. ಆದರೆ ಕಾಂಗ್ರೆಸ ಪಕ್ಷದ ಲೆಟರ್ ಹೆಡ್ ನಲ್ಲಿ ಈ ಹುದ್ದೆಗೆ ಆಯ್ಕೆಯಾದವರ ಹೆಸರು ಪ್ರಕಟಿಸಿರುವುದು ಶಾಸನಸಭೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಾಂವಿಧಾನಿಕ ಆಶಯಗಳನ್ನು ಕಾಂಗ್ರೆಸ್ ಪಕ್ಷವು ಹೇಗೆ ಬೇಕಾದರೂ ಗಾಳಿಗೆ ತೂರುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭಾಧ್ಯಕ್ಷ, ಉಪಸಭಾಧ್ಯಕ್ಷ, ಸಭಾಪತಿ ಹಾಗೂ ಉಪಸಭಾಪತಿಗಳು ಯಾವುದೇ ಪಕ್ಷದ ಪ್ರತಿನಿಧಿಗಳಲ್ಲ. ಅವರು ಇಡೀ ಸದನದ ಮತ್ತು ಪ್ರಜಾಪ್ರಭುತ್ವದ ಗೌರವವನ್ನು ಪ್ರತಿನಿಧಿಸುವ ಸಂವಿಧಾನಾತ್ಮಕ ಹುದ್ದೆಗಳಲ್ಲಿರುವವರು. ಇಂತಹ ಹುದ್ದೆಗಳಿಗೆ ಸಂಬಂಧಿಸಿದ ಅಧಿಕೃತ ಪತ್ರವ್ಯವಹಾರವನ್ನು ಕಾಂಗ್ರೆಸ್ ಪಕ್ಷದ ಲೆಟರ್ಹೆಡ್ನಲ್ಲಿ ನಡೆಸಿರುವುದು ಕೇವಲ ಒಂದು ಆಡಳಿತಾತ್ಮಕ ಲೋಪವಲ್ಲ. ಸಂವಿಧಾನಾತ್ಮಕ ಹುದ್ದೆಗಳ ನಿಷ್ಪಕ್ಷಪಾತತೆ ಮತ್ತು ಘನತೆಯನ್ನು ಪಕ್ಷದ ಚೌಕಟ್ಟಿನೊಳಗೆ ಸೀಮಿತಗೊಳಿಸುವ ಆತಂಕಕಾರಿ ನಡೆ. ಈ ನಿರ್ಧಾರ ಭವಿಷ್ಯದಲ್ಲಿ ಅತ್ಯಂತ ಅಪಾಯಕಾರಿ ಪೂರ್ವನಿದರ್ಶನಗಳನ್ನು ಸೃಷ್ಟಿಸುವ ಅಪಾಯವಿದೆ. ಲೋಕಸಭೆಯಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ ಎಂದು ಅರಚುವ ರಾಹುಲ್ ಗಾಂಧಿಯವರ ದ್ವಿಮುಖ ನೀತಿಗೆ ಈ ಲೆಟರ್ ಹೆಡ್ ಆದೇಶ ಒಂದು ಉದಾಹರಣೆಯಾಗಿದೆ.
ಈ ಹಿಂದೆ ಕಾಂಗ್ರೆಸ್ ನಲ್ಲಿ ಪ್ರಸಿದ್ದವಾಗಿದ್ದ ಲಕೋಟೆ ರಾಜಕಾರಣ ಮುಖ್ಯಮಂತ್ರಿ ಯಾರೆಂದೆ ನಿರ್ಧರಿಸುತ್ತಿತ್ತು. ಈಗ ಲೆಟರ್ ಹೆಡ್ ಶಾಸನಸಭೆಯ ಮುಖ್ಯಸ್ಥನ ಆಯ್ಕೆಯವರೆಗೆ ಬಂದಿರುವುದು ದುರಾದೃಷ್ಟಕರ ಬೆಳವಣಿಗೆ ಎಂದು ಸುನಿಲ್ ಕುಮಾರ್ ಬಣ್ಣಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
